ಐಪಿಎಲ್ನಿಂದ ವಿವೋ ಪ್ರಾಯೋಜಕತ್ವವನ್ನು ಬಹಿಷ್ಕರಿಸಲು ಬಿಸಿಸಿಐಗೆ ತಾಕತ್ತು ಇದೆಯಾ ?
ಚೀನಾ ಮೂಲದ ವಿವೋ ಕಂಪೆನಿಯೊಂದಿಗೆ ಬಿಸಿಸಿಐ ಐದು ವರ್ಷಗಳ ಒಪ್ಪಂದ
2022ರವರೆಗೆ ಬಿಸಿಸಿಐ ಮತ್ತು ವಿವೋ ಕಂಪೆನಿಯ ಒಪ್ಪಂದ
ಐಪಿಎಲ್ಗೆ ವರ್ಷಕ್ಕೆ 440 ಕೋಟಿ ರೂಪಾಯಿ ನೀಡುತ್ತಿರುವ ವಿವೋ ಕಂಪೆನಿ
ಭಾರತ ಮತ್ತು ಚೀನಾ ಗಡಿ ವಿವಾದದ ಕಿಡಿ ಈಗ ಬೆಂಕಿ ಹಚ್ಚಿಕೊಂಡಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದ್ರ ಬೆನ್ನಲ್ಲೆ ಭಾರತದಲ್ಲಿ ಈಗ ಚೀನಾ ವಸ್ತುಗಳನ್ನು ನಿಷೇಧಿಸಿ ಅನ್ನೋ ಅಭಿಯಾನವೂ ಶುರುವಾಗಿದೆ. ಚೀನಾದ ಉತ್ಪನ್ನಗಳನ್ನು ಯಾರು ಬಳಕೆ ಮಾಡಬಾರದು ಅಂತ ಸಾಮಾಜಿನ ಜಾಲ ತಾಣದಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿದೆ.
ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡಿ ಅನ್ನೋ ಅಭಿಯಾನ ಈಗ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕೊರೋನಾ ವೈರಸ್ನಿಂದಾಗಿ ಬಿಸಿಸಿಐ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಅದ್ರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಕೂಡ ಸಾಧ್ಯವಾಗುತ್ತಿಲ್ಲ. ಆದ್ರೂ ಹೇಗಾದ್ರೂ ಮಾಡಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲೇಬೇಕು ಅನ್ನೋ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದೆ.
ಇದ್ರ ಬೆನ್ನಲ್ಲೇ ಈಗ ಚೀನಾ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸಬೇಕು ಅನ್ನೋ ಕೂಗು ಕೂಡ ಜೋರಾಗಿ ಕೇಳಿಬರುತ್ತಿದೆ. ಹೀಗಾಗಿ ಬಿಸಿಸಿಐನ ಚಿನ್ನದ ಮೊಟ್ಟೆ ಐಪಿಎಲ್ ಟೂರ್ನಿಗೂ ಪೆಟ್ಟು ಬೀಳಲಿದೆ. ಯಾಕಂದ್ರೆ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ನೀಡುತ್ತಿರುವುದು ಚೀನಾ ಮೂಲದ ಕಂಪೆನಿ ವಿವೋ. ಚೀನಾ ಮೂಲದ ವಿವೋ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಜಾಸ್ತಿ ಚಾಲ್ತಿಯಲ್ಲಿದೆ. ವಿವೋ ಮೊಬೈಲ್ ಕಂಪೆನಿಯು ತನ್ನ ಬ್ರ್ಯಾಂಡ್ ಅನ್ನು ಹೆಚ್ಚಿಸಲು ಬಿಸಿಸಿಐ ಜೊತೆಗೆ 2022ರವರೆಗಿನ ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ.
ಬಿಸಿಸಿಐಗೆ ವಿವೋ ಕಂಪೆನಿಯಿಂದ ವರ್ಷಕ್ಕೆ ಸುಮಾರು 440 ಕೋಟಿ ರೂಪಾಯಿ ಆದಾಯ ಬರುತ್ತದೆ. ಇದ್ರಲ್ಲಿ ಶೇ,42ರಷ್ಟು ಹಣವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡ್ತಾ ಇದೆ. ಹೀಗಾಗಿ ಈ ಅಭಿಯಾನವೇನಾದ್ರೂ ತೀವ್ರ ಸ್ವರೂಪ ಪಡೆದುಕೊಂಡ್ರೆ ಬಿಸಿಸಿಐ ಬೊಕ್ಕಸಕ್ಕೆ ಮತ್ತು ಸರ್ಕಾರದ ಬೊಕ್ಕಸಕ್ಕೂ ನಷ್ಟವುಂಟಾಗಲಿದೆ.
ಈಗಾಗಲೇ ಕ್ರಿಕೆಟಿಗರು ಚೀನಾ ಸೈನಿಕರ ಗುಂಡಿನ ದಾಳಿಗೆ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.
ದೇಶದ ರಕ್ಷಣೆಗೆ ಸೈನಿಕರ ಪಾತ್ರ ದೊಡ್ಡದ್ದು. ಅವರೇ ರಿಯರ್ ಹೀರೋಗಳು ಅಂತ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾದ ಕ್ರಿಕೆಟಿಗರು ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಭಿಯಾನಕ್ಕೆ ಸಾಥ್ ಕೊಡ್ತಾರಾ ? ಚೀನಾ ಕಂಪೆನಿಯು ಪ್ರಾಯೋಜಕತ್ವ ನೀಡಿದ್ರೆ ತಾವು ಐಪಿಎಲ್ ನಲ್ಲಿ ಆಡುವುದಿಲ್ಲ ಎಂದು ಹೇಳುವ ಧೈರ್ಯ ನಮ್ಮ ಕ್ರಿಕೆಟಿಗರಿಗೆ ಇದೆಯಾ ?
ಈ ಪ್ರಶ್ನೆಗಳಿಗೆ ನೇರ ಉತ್ತರ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ನಮ್ಮ ಕ್ರಿಕೆಟಿಗರಿಗೆ ಇಲ್ಲ. ಯಾಕಂದ್ರೆ ಅವರಿಗೆ ಗೊತ್ತು ಇಲ್ಲಿ ದುಡ್ಡು ಮತ್ತು ರಾಜಕಾರಣ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದು. ಅಷ್ಟೇ ಅಲ್ಲ, ಒಂದು ವೇಳೆ ದಿಟ್ಟವಾಗಿ ಹೇಳಿದ್ರೆ ಎಲ್ಲಿ ತಮ್ಮ ಅವಕಾಶ ಕಳೆದುಹೋಗುತ್ತೆ ಅನ್ನೋ ಆತಂಕವೂ ಅವರಲ್ಲಿದೆ. ಹೀಗಾಗಿ ಕ್ರಿಕೆಟಿಗರು ಆ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ. ಹಾಗಾದ್ರೆ ಯಾರು ತೆಗೆದುಕೊಳ್ಳಬೇಕು… ನೇರವಾಗಿ ಕೈ ತೋರಿಸುವುದು ಬಿಸಿಸಿಐ ಮೇಲೆ.
ಆದ್ರೆ ಈ ಎಲ್ಲಾ ಪ್ರಶ್ನೆಗಳು ಮೊದಲೇ ಕೇಳಿಬರುತ್ತವೆ ಎಂಬುದನ್ನು ಅರಿತುಕೊಂಡಿರುವ ಬಿಸಿಸಿಐ ಕೂಡ ಕೂಡ ಎಚ್ಚೆತ್ತುಕೊಂಡಿದೆ. ಬಿಸಿಸಿಐ ಈಗ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಏನಾದ್ರೂ ಸೂಕ್ತ ನಿರ್ಧಾರ ತೆಗೆದುಕೊಂಡ್ರೆ ಮಾತ್ರ ನಾವು ವಿವೋ ಕಂಪೆನಿಯ ಪ್ರಾಯೋಜಕತ್ವದ ಒಪ್ಪಂದದಿಂದ ಹೊರಬರುವುದಾಗಿ ಹೇಳಿದೆ.
ನಮಗೆ ಜನರ ಭಾವನೆಗಳು ಅರ್ಥವಾಗುತ್ತದೆ. ಐಪಿಎಲ್ಗೆ ವಿವೋ ಕಂಪೆನಿಯೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಆದ್ರೆ ಐಪಿಎಲ್ ಪ್ರಾಯೋಜಕತ್ವದಿಂದ ಬರುತ್ತಿರುವ ಹಣ ಚೀನಾದ ಬೊಕ್ಕಸಕ್ಕೆ ಸೇರಿಕೊಳ್ಳುತ್ತಿಲ್ಲ. ಬದಲಾಗಿ ಚೀನಾ ಮೂಲದ ಕಂಪೆನಿಯೂ ಭಾರತದಲ್ಲಿ ವಿವೋ ಮೊಬೈಲ್ ಅನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಗ್ರಾಹಕರನ್ನು ಸೆಳೆಯಲು ಮತ್ತು ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ವಿವೋ ಕಂಪೆನಿಯೂ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವವನ್ನು ನೀಡಿದೆ. ಈ ಹಣದಲ್ಲಿ ಐಪಿಎಲ್ ಸೇರಿದಂತೆ ಭಾರತ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹಣ ಪಾವತಿಯಾಗುತ್ತದೆ ಎಂಬ ಹಾರಿಕೆಯ ಉತ್ತರವನ್ನು ನೀಡುತ್ತಿದೆ ಬಿಸಿಸಿಐ.
ನಾವು ಈಗಾಗಲೇ ಮೊಟೇರಾದಲ್ಲಿ ಅತ್ಯಾಧುನಿಕ ಮಟ್ಟದ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದ್ದೇವೆ. ಈ ಕ್ರೀಡಾಂಗಣದ ಗುತ್ತಿಗೆಯನ್ನು ನಾವು ಚೀನಾ ಕಂಪೆನಿಗೆ ನೀಡಿಲ್ಲ. ಬದಲಾಗಿ ಎಲ್ ಆಂಡ್ ಟಿ ಕಂಪೆನಿಗೆ ನೀಡಿದ್ದೇವೆ. ಒಂದು ವೇಳೆ ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ್ರೆ ಆಗ ಚೀನಾದ ಆರ್ಥಿಕತೆಗೆ ನೆರವು ನೀಡಿದಂತಾಗುತ್ತದೆ. ಆದ್ರೆ ಐಪಿಎಲ್ ಪ್ರಾಯೋಜಕತ್ವ ಹಾಗಲ್ಲ. ಅವರು ನೀಡಿರುವ ಹಣ ನಮ್ಮ ದೇಶಕ್ಕೆ ಸಹಾಯವಾಗುತ್ತದೆ ಎಂದು ಬಿಸಿಸಿಐ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುತ್ತಿದೆ.
ಬಿಸಿಸಿಐನ ಕೋಶಾಧಿಕಾರಿ ಅರುಣ್ ಧೂಮಾಲ್ ಈ ವಿಚಾರವಾಗಿ ಮಾತನಾಡಿದ್ದಾರೆ. ಅವರ ಎರಡೂ ಹೇಳಿಕೆಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ. ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಗುತ್ತಿಗೆಯನ್ನು ಚೀನಾ ಕಂಪೆನಿಗೆ ಕೊಟ್ಟಿಲ್ಲ. ಒಂದು ವೇಳೆ ಕೊಟ್ರೆ ಅದು ಚೀನಾದ ಆರ್ಥಿಕತೆಗೆ ನೆರವು ಆಗುತ್ತದೆ. ಅದೇ ಐಪಿಎಲ್ ಪ್ರಾಯೋಜಕತ್ವ ನೀಡಿದ್ರೆ ಅದು ಚೀನಾ ಆರ್ಥಿಕತೆಗೆ ಸದ್ಭಳಕೆಯಾಗುತ್ತಿಲ್ಲ ಎಂದು ಇಬ್ಬಗೆಯ ನೀತಿಯಲ್ಲಿ ಮಾತನಾಡಿದ್ದಾರೆ.
ಇನ್ನು ಈ ಹಿಂದೆ ಟೀಮ್ ಇಂಡಿಯಾದ ಜೆರ್ಸಿಗೆ ಒಪ್ಪೋ ಮೊಬೈಲ್ ಕಂಪೆನಿಯು ಪ್ರಾಯೋಜಕತ್ವ ನೀಡಿತ್ತು. ಆದ್ರೆ ಕಳೆದ ವರ್ಷದಿಂದ ಬೆಂಗಳೂರು ಮೂಲದ ಬೈಜು ಕಂಪೆನಿಯೂ ಪ್ರಾಯೋಜಕತ್ವ ನೀಡುತ್ತಿದೆ. ಹಾಗೇ ಐಪಿಎಲ್ಗೂ ಕೂಡ ಬೇರೆ ಪ್ರಾಯೋಜಕತ್ವ ಸಿಗುತ್ತಾರೆ. ಅದಕ್ಕೆ ಮನಸ್ಸು ಇರಬೇಕು. ಭಾವನಾತ್ಮಕವಾಗಿ ಯೋಚನೆ ಮಾಡಬೇಕು. ಭಾರತದಲ್ಲೇ ಎಷ್ಟೊಂದು ಕಂಪೆನಿಗಳಿವೆ. ಅವರಿಗೂ ಅವಕಾಶ ನೀಡಬಹುದು. ಆದ್ರೆ ಇಲ್ಲಿ ದುಡ್ಡೇ ಮುಖ್ಯ. ಯಾರು ಹೆಚ್ಚು ದುಡ್ಡು ಕೊಡ್ತಾರೋ ಅವರನ್ನೇ ಆಯ್ಕೆ ಮಾಡಿಕೊಳ್ಳುವುದು ಬಿಸಿಸಿಐನ ಜಾಯಮಾನ ಕೂಡ.
ಒಟ್ಟಿನಲ್ಲಿ ದುಡ್ಡಿಗಿಂತ ದೇಶದ ಭಾವನಾತ್ಮಕ ವಿಷಯಗಳು ಮುಖ್ಯ ಎಂಬುದನ್ನು ಬಿಸಿಸಿಐ ಅರಿತುಕೊಳ್ಳಬೇಕು, ದೇಸಿ ಕಂಪೆನಿಗಳಿಗೆ ಬೆಂಬಲ ನೀಡಿದ್ರೆ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ಇನ್ನಷ್ಟು ಮಟ್ಟಕ್ಕೆ ಬೆಳೆಯಬಹುದು. ಹೀಗಾಗಿ ಬಿಸಿಸಿಐ ಕೂಡ ಚೀನಾ ಉತ್ಪನ್ನಗಳ ಜಾಹಿರಾತುಗಳನ್ನು ನಿಷೇಧಿಸಿ ಅಭಿಯಾನಕ್ಕೆ ಬೆಂಬಲ ನೀಡಬೇಕು. ಆದ್ರೆ ಅದು ಆಗುತ್ತಾ… ?