ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ದಾಖಲೆಗಾಗಿ ಬ್ಯಾಟ್ ಬೀಸದಿದ್ದರೂ ದಾಖಲೆ ಬರೆದಿದ್ದಾರೆ.
ಸಿಕ್ಸರ್, ಬೌಂಡರಿ ಸಿಡಿಸಿ ವಿಶ್ವಕಪ್ ಕ್ರಿಕೆಟ್ (World Cup Cricket) ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ವಿಶ್ವ ದಾಖಲೆ (World Record) ಮುಡಿಗೇರಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ವಿಶ್ವಕಪ್ ನ 11 ಪಂದ್ಯ ಆಡಿರುವ ರೋಹಿತ್ ಶರ್ಮಾ 597 ರನ್ ಸಿಡಿಸಿ ಇತಿಹಾಸ ಬರೆದಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಆಗಿ ರೋಹಿತ್ ಹೊರಹೊಮ್ಮಿದ್ದಾರೆ.
2019ರಲ್ಲಿ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ 578 ರನ್, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ 539 ರನ್, 2019 ರಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ 507 ರನ್ ಗಳಿಸಿದ ಸಾಧನೆ ಮಾಡಿದ್ದರು. ಫೈನಲ್ನಲ್ಲಿ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್( 3 ಸಿಕ್ಸರ್, 4 ಬೌಂಡರಿ) ಸಿಡಿಸಿ ಔಟಾದರು. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.