ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳಿಗೆ ಉಪುಚುನಾವಣೆ ಮತದಾನ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಟ್ವಿಟರ್ ಮೂಲಕ ಪ್ರಶ್ನೆಗಳ ಸರಮಾಲೆ ಎಸೆದಿದ್ದಾರೆ.
ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲು ದುಡ್ಡಿಲ್ಲ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ 90,000 ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ ? #ಉತ್ತರಕೊಡಿ_ಬಿಎಸ್‍ವೈ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆಗಸ್ಟ್‍ನಿಂದ ಮೂರು ತಿಂಗಳು ಸುರಿದ ಮಳೆಯಿಂದಾಗಿ 23 ಜಿಲ್ಲೆಗಳ 130 ತಾಲ್ಲೂಕುಗಳು ಬಾಧಿತವಾಗಿವೆ. ಕಳೆದ ವರ್ಷ 10 ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದರೆ, ಈ ವರ್ಷ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಈ ದುಪ್ಪಟ್ಟು ನಷ್ಟದಿಂದ ರೈತರು ನೆಲಹಿಡಿದಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಕೇಳಿದ್ದು ರೂ.35,000 ಕೋಟಿ, ನೀಡಿದ್ದು ರೂ.1654 ಕೋಟಿ. ಈ ಬಾರಿ ರಾಜ್ಯ ಸರ್ಕಾರ ಈ ವರೆಗೆ ಕೇಳಿದ್ದು ರೂ.4000 ಕೋಟಿ. ಕೇಂದ್ರದಿಂದ ಸಮರ್ಪಕ ಪರಿಹಾರ ಕೇಳಲೂ ನಿಮಗೆ ಭಯನಾ? #ಉತ್ತರಕೊಡಿ_ಬಿಎಸ್‍ವೈ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ವರ್ಷ ಸರ್ಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2,24,000, ಪರಿಹಾರ ನೀಡಿರುವುದು ಮಾತ್ರ 1,24,000 ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಸರ್ಕಾರ ಪರಿಹಾರ ನೀಡುವುದು ಯಾವಾಗ?
ಕಳೆದ ವರ್ಷದ ಬೆಳೆ-ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಈ ವರ್ಷ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು, ಸಚಿವರು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ಮನೆಯಲ್ಲಿ ಹಾಯಾಗಿದ್ದಾರೆ,
ಸಂತ್ರಸ್ತರು ಬೀದಿಯಲ್ಲಿದ್ದಾರೆ. ಸರ್ಕಾರದ ಖಜಾನೆ ಖಾಲಿಯಗಿದೆ, ದುಡ್ಡ ಎಲ್ಲಿಗೆ ಹೋಯತು, #ಉತ್ತರಕೊಡಿ_ಬಿಎಸ್‍ವೈ ಎಂದು ಸರಣಿ ಟ್ವೀಟ್‍ಗಳ ಮೂಲಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪಿಂಜರಾ ಪೌಲ್‍ಗಳೆಲ್ಲ ಹಣಕಾಸು ಸಚಿವರಾದ್ರೆ: ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಟಾಂಗ್
ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ವಾ? ಅವರಿಗೆ ಏನೂ ಕೆಲಸವಿಲ್ಲ. ಅವರು ಅರ್ಥ ಮಾಡ್ಕೋ ಬೇಕು. ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿದೆ. ಲಾಕ್‍ಡೌನ್, ಸೀಲ್‍ಡೌನ್ ನಿಂದ ಜಗತ್ತೇ ತತ್ತರಿಸಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಆರ್ಥಿಕ ಸಂಕಷ್ಟವಿದೆಯಾ ಎಂದು ಪ್ರಶ್ನಿಸಿದರು.
ಅಲ್ಲದೆ ಪಿಂಜರಾ ಪೌಲ್ ಸಚಿವರೆಲ್ಲ ಹಣಕಾಸು ಸಚಿವರಾದರೆ ಇಷ್ಟೇ ಎಂದು ವ್ಯಂಗವಾಡಿದ ಶ್ರೀನಿವಾಸ ಪ್ರಸಾದ್,
ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಷ್ಟು ವರ್ಷ ಕೆಲಸ ಮಾಡಿದ್ದೀನಿ ಅಂತ ಕೊಚ್ಚಿ ಕೊಳ್ತೀರಾ, ಸಾಮಾನ್ಯ ವ್ಯಕ್ತಿಗೆ ಅರ್ಥವಾಗೋದು, ನಿಮಗೆ ಅರ್ಥ ಆಗೊಲ್ವಾ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel