ಸಚಿನ್, ಗಂಗೂಲಿಗೆ ಅಡ್ಡಗಾಲು ಹಾಕಿರುವುದರ ಹಿಂದಿತ್ತು ದ್ರಾವಿಡ್ ದೂರದೃಷ್ಟಿ…!
2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತ್ತು. ಮಹೇಂದ್ರ ಸಿಂಗ್ ಧೋನಿಯವರ ಚೊಚ್ಚಲ ನಾಯಕತ್ವದಲ್ಲೇ ಟೀಮ್ ಇಂಡಿಯಾಗೆ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಒಲಿದುಬಂತು. ಯುವ ಆಟಗಾರರ ದಂಡನ್ನು ಹೊಂದಿದ್ದ ಧೋನಿ ಪಡೆ ಪ್ರಶಸ್ತಿ ಗೆಲ್ಲುತ್ತೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದ್ರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ್ದ ಧೋನಿ ಬಾಯ್ಸ್ ಇತಿಹಾಸವನ್ನೇ ನಿರ್ಮಿಸಿದ್ದರು. ಇದು ಈಗ ಇತಿಹಾಸ
ಅಂದ ಹಾಗೇ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ತ್ರಿಮೂರ್ತಿಗಳು ಆಡಿರಲಿಲ್ಲ. ಸಚಿನ್, ಸೌರವ್ ಮತ್ತು ದ್ರಾವಿಡ್ ತಂಡದಲ್ಲಿ ಇರಲಿಲ್ಲ. ಈ ನಡುವೆ ಕೆರೆಬಿಯನ್ ವಿಶ್ವಕಪ್ ಸೋಲು ಕೂಡ ಟೀಮ್ ಇಂಡಿಯಾದ ಹಿರಿಯ ಆಟಗಾರರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಆದ್ರೂ ಸಚಿನ್, ಸೌರವ್, ದ್ರಾವಿಡ್ ತಂಡದಲ್ಲಿರಬೇಕಿತ್ತು ಎಂಬ ಭಾವನೆ ಕೂಡ ಮೂಡಿತ್ತು. ಆದ್ರೆ ಆಗೀನ ಆಯ್ಕೆ ಸಮಿತಿ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಅಲ್ಲದೆ ಆ ಪ್ರಯೋಗದ ರೂವಾರಿ ರಾಹುಲ್ ದ್ರಾವಿಡ್ ಎಂಬುದು ಹಲವರಿಗೆ ಗೊತ್ತಿಲ್ಲ.
ಈ ವಿಚಾರವನ್ನು ಅಂದಿನ ಟೀಮ್ ಇಂಡಿಯಾದ ಮ್ಯಾನೇಜರ್ ಲಾಲ್‍ಚಂದ್ ರಜಪೂತ್ ಬಹಿರಂಗಗೊಳಿಸಿದ್ದಾರೆ. ಭವಿಷ್ಯದ ಟೀಮ್ ಇಂಡಿಯಾಗೆ ನೀಲ ನಕ್ಷೆ ರಚಿಸಿದ್ದು ಕೂಡ ರಾಹುಲ್ ದ್ರಾವಿಡ್. ವಿಪರ್ಯಾಸ ಅಂದ್ರೆ ರಾಹುಲ್ ದ್ರಾವಿಡ್ 2011ರ ವಿಶ್ವಕಪ್ ಗೆಲುವಿನ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿರುವುದು.
ಅಂದ ಹಾಗೇ, ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಸಚಿನ್, ಗಂಗೂಲಿಗೆ ಆಡುವ ಆಸೆ ಇತ್ತು. ಆದ್ರೆ ಅವರ ಆಸೆಯನ್ನು ಭಗ್ನಗೊಳಿಸಿದ್ದು ರಾಹುಲ್ ದ್ರಾವಿಡ್.
ಹೌದು. ರಾಹುಲ್ ದ್ರಾವಿಡ್, ಸಚಿನ್ ಮತ್ತು ಗಂಗೂಲಿಯವರ ಬಳಿ ಟಿ-ಟ್ವೆಂಟಿ ವಿಶ್ವಕಪ್ ಆಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರಂತೆ. ಯುವ ಆಟಗಾರರಿಗೆ ಅವಕಾಶ ನೀಡೋಣ ಅನ್ನೋ ಅಭಿಪ್ರಾಯವನ್ನು ದ್ರಾವಿಡ್ ಅವರು ಸಚಿನ್ ಮತ್ತು ಗಂಗೂಲಿ ಬಳಿ ಹೇಳಿದ್ದರು ಅಂತ ರಜಪೂತ್ ಹೇಳಿಕೊಂಡಿದ್ದಾರೆ.
ಇನ್ನು ಸಚಿನ್‍ಗೆ ವಿಶ್ವಕಪ್ ಗೆಲ್ಲಲು ಆಗಲಿಲ್ಲ ಅನ್ನೋ ಕೊರಗು ಕಾಡುತ್ತನೇ ಇತ್ತು. ಹಲವಾರು ವರ್ಷಗಳಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ ಹಲವಾರು ದಾಖಲೆಗಳನ್ನು ಮಾಡಿದ್ರೂ ಸಚಿನ್‍ಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಅನ್ನೋ ನೋವು ಕೂಡ ಇತ್ತು. ಇದನ್ನು ಸಚಿನ್ ಆಗಾಗ ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಆದ್ರೆ 2011ರ ವಿಶ್ವಕಪ್ ಗೆಲ್ಲುವ ಮೂಲಕ ಸಚಿನ್ ತನ್ನ ಆಸೆಯನ್ನು ಈಡೇರಿಸಿಕೊಂಡ್ರು ಎಂದು ಲಾಲ್‍ಚಂದ್ ರಜಪೂತ್ ಹೇಳಿದ್ದಾರೆ.
2007ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಾನು ಟೀಮ್ ಇಂಡಿಯಾದ ಮ್ಯಾನೇಜರ್ ಆಗಿದ್ದೆ. ಇದೊಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಯಾಕಂದ್ರೆ ನಮ್ಮದು ಯುವ ತಂಡ. ತಂಡದಲ್ಲಿ ಕೆಲವೊಂದು ಹಿರಿಯ ಆಟಗಾರರು ಇದ್ರು. ನನಗೆ ಒಂದು ಉತ್ತಮ ಅವಕಾಶ ಸಿಕ್ಕಿತ್ತು. ತಂಡಕ್ಕೆ ಕೋಚ್ ಆಗಿ ಕೆಲಸ ಮಾಡೋದು. ಹಾಗೇ ಧೋನಿಯ ಚೊಚ್ಚಲ ನಾಯಕತ್ವದ ತಂಡಕ್ಕೂ ಕೋಚ್ ಆಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು ಎಂದು 13 ವರ್ಷಗಳ ಹಿಂದಿನ
ಘಟನೆಯನ್ನು ರಜಪೂತ್ ಅವರು ನೆನಪಿಸಿಕೊಂಡ್ರು.
ಇನ್ನು ತಂಡದ ಡ್ರೆಸಿಂಗ್ ರೂಂನ ವಾತಾವರಣ ತುಂಬಾನೇ ಚೆನ್ನಾಗಿತ್ತು. ನಾವು ನಿರ್ದಿಷ್ಟವಾದ ಗುರಿಯನ್ನು ಹೊಂದಿದ್ದೇವು. ನಾವು ಟೆನ್ಷನ್‍ಗೆ ಒಳಪಡಬಾರದು. ನಾವು ಟೆನ್ಷನ್ ನೀಡಬೇಕು. ಇದು ತಂಡದ ಮುಖ್ಯ ಉದ್ದೇಶವಾಗಿತ್ತು. ನಾವು ನಮ್ಮ ಸಾಮಥ್ರ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವು. ಬೇರೆಯವರು ಏನು ಹೇಳ್ತಾರೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗೆ ಟಿ-ಟ್ವೆಂಟಿ ವಿಶ್ವಕಪ್ ಗೆಲುವು ಹಲವು ಬದಲಾವಣೆಗಳಿಗೆ ಕಾರಣವಾಗಿತ್ತು. ಅಲ್ಲದೆ ಕೆಲವು ಹಿರಿಯ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಪರದಾಟ ನಡೆಸಬೇಕಾಯ್ತು. ಆದ್ರೆ ಯುವ ಹಾಗೂ ಹಿರಿಯ ಆಟಗಾರರ ಹೊಂದಾಣಿಕೆಯಿಂದ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಳ್ಳಲು ಸಾಧ್ಯವಾಯ್ತು ಅಂತಾರೆ ಲಾಲ್‍ಚಂದ್ ರಜಪೂತ್.