ನವದೆಹಲಿ: ಕೋವಿಡ್ ಆಸ್ಪತ್ರೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಕೊರೊನಾದಿಂದ ಮೃತಪಟ್ಟ ಹಿಂದೂ ಹಾಗೂ ಮುಸ್ಲಿಂ ಮಹಿಳೆಯರಿಬ್ಬರ ಶವಗಳೇ ಅದಲು ಬದಲಾಗಿದೆ.
ಹೀಗಾಗಿ ಮುಸ್ಲಿಂ ಮಹಿಳೆಯ ಶವಕ್ಕೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದು ಇಡೀ ಪ್ರಕರಣ ಗೊಂದಲಕ್ಕೆ ಕಾರಣವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಯಡವಟ್ಟು ಆಗಿದ್ದು ಹೇಗೆ..!
ನವದೆಹಲಿಯ ಏಮ್ಸ್ ಟ್ರಾಮಾ ಆಸ್ಪತ್ರೆಯಲ್ಲಿ ನಜ್ಮಾ (ಹೆಸರು ಬದಲಾಯಿಸಲಾಗಿದೆ) ಹಾಗೂ ನವ್ಯಾ (ಹೆಸರು ಬದಲಾಯಿಸಲಾಗಿದೆ) ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಇಂದು ಎರಡೂ ಕಡೆಯ ಸಂಬಂಧಿಕರು ಬಂದು ಮೃತರ ಶವ ಪಡೆದು ಹೋಗಿದ್ದಾರೆ.
ಎರಡು ಶವಗಳಿಗೂ ಕೊರೊನ ಸೋಂಕು ಹರಡದಂತೆ ಪ್ಲಾಸ್ಟಿಕ್ ಕವರ್ನಿಂದ ಸುತ್ತಲಾಗಿತ್ತು. ಮೊದಲು ಬಂದ ನವ್ಯಾ(ಹಿಂದೂ) ಸಂಬಂಧಿಕರು ಶವ ತೆಗೆದುಕೊಂಡು ಹೋಗಿ ಹಿಂದೂ ಸಂಪ್ರದಾಯದಂತೆ ಚಿತೆಗೆ ಅಗ್ನಿ ಸ್ಪರ್ಷ ಮಾಡಿದ್ದಾರೆ.
ನಂತರ ಬಂದ ನಜ್ಮಾ(ಮುಸ್ಲಿಂ) ಕುಟುಂಬದವರಿಗೂ ಏಮ್ಸ್ ಆಸ್ಪತ್ರೆ ಸಿಬ್ಬಂದಿ ಶವ ಹಸ್ತಾಂತರ ಮಾಡಿದ್ದಾರೆ. ಶವವನ್ನು ದೆಹಲಿ ಗೇಟ್ನ ಮುಸ್ಲಿಂ ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಮಣ್ಣಿನಲ್ಲಿ ಹೂಳಲು ಅಂತಿಮ ಸಿದ್ಧತೆ ಮಾಡಿಕೊಂಡಿದ್ದರು.
ಈ ವೇಳೆ ಮೃತಳ ಮಕ್ಕಳು ತಾಯಿಯ ಮುಖವನ್ನು ಕೊನೆಯದಾಗಿ ನೋಡಬೇಕೆಂದು ಹಠ ಹಿಡಿದರು. ಆಗ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅದು ತಮ್ಮ ತಾಯಿ ನಜ್ಮಾ ಅವರು ಅಲ್ಲವೇ ಅಲ್ಲ ಎಂದಿದ್ದಾರೆ.
ಕೂಡಲೇ ಶವವನ್ನು ಮತ್ತೆ ಏಮ್ಸ್ ಆಸ್ಪತ್ರೆಗೆ ತಂದ ನಜ್ಮಾ ಸಂಬಂಧಿಕರು, ಸರಿಯಾಗಿ ನೋಡಿ ಶವ ನೀಡುವಂತೆ ಕೇಳಿದ್ದಾರೆ. ಆದರೆ ಮುಸ್ಲಿಂ ಮಹಿಳೆಯ ಶವವನ್ನು ಬೆಳಿಗ್ಗೆಯೇ ನವ್ಯಾ(ಹಿಂದೂ) ಸಂಬಂಧಕರಿಗೆ ಕೊಟ್ಟಿದ್ದೇವೆ ಎಂಬ ಉತ್ತರ ಬಂದಿದೆ.
ನವ್ಯಾ ಸಂಬಂಧಿಕರಿಗೆ ಫೋನ್ ಮಾಡಿ ಕೇಳಿದಾಗ ಶವವನ್ನು ಪಂಜಾಬಿ ಭಾಗ್ನ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಗ್ನಿಸ್ಪರ್ಷ ಮಾಡಿ ಮುಗಿಸಿದ್ದೇವೆ ಎಂದಿದ್ದಾರೆ.
ಶವ ಅದಲು-ಬದಲಾದ ಸಂಗತಿ ಕೇಳಿ ಎರಡೂ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಮುಸ್ಲಿಂ ಮಹಿಳೆಯ ಶವವನ್ನು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದೇವೆಯೇ ಎಂಬ ಕೊರಗು ಅವರನ್ನು ಕಾಡುತ್ತಿದೆ.
ಏಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಶವಾಗಾರದ ಒಬ್ಬ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಮತ್ತೊಬ್ಬ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.