ಬೆಂಗಳೂರು: ಮಕ್ಕಳು ಆನ್ಲೈನ್ ಶಿಕ್ಷಣ ನೋಡಲು ಟಿ.ವಿ ಖರೀದಿಗಾಗಿ ತಾಳಿಯನ್ನೇ ಅಡವಿಟ್ಟ ಮಹಾತಾಯಿಗೆ ಶಾಸಕ ಜಮೀರ್ ಅಹಮದ್ 50 ಸಾವಿರ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ಕಸ್ತೂರಿ ಎಂಬುವರು ತಮ್ಮ ಮಕ್ಕಳು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇತುಬಂಧ ಆನ್ಲೈನ್ ಪಾಠ ಕೇಳಲಾಗದೆ ವಂಚಿತರಾಗಿದ್ದರು. ಇದನ್ನು ಮನಗಂಡ ತಾಯಿ ಕಸ್ತೂರಿ ತಾಳಿ ಅಡವಿಟ್ಟು ಟಿ.ವಿ ಖರೀದಿಸಿದ್ದರು.
ಈ ವಿಚಾರ ನಿನ್ನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಹಲವರು ನೆರವಿನ ಹಸ್ತ ಚಾಚಿದ್ದರು. ತಾಳಿ ಅಡವಿಟ್ಟು ಸಾಲ ನೀಡಿದ ಗಿರವಿ ಅಂಗಡಿ ಮಾಲೀಕ ಕೂಡ ತಾಳಿ ವಾಪಸ್ ನೀಡಿ ಹಣ ಇದ್ದಾಗ ತೀರಿಸುವಂತೆ ಹೇಳಿದ್ದರು.
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ಚರ್ಚೆ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆ ಒಂದು ಕ್ಷಣವೂ ತಡಮಾಡದ ಶಾಸಕ ಜಮೀರ್ ಅಹ್ಮದ್, ಸ್ನೇಹಿತರ ಮೂಲಕ 50 ಸಾವಿರ ಹಣವನ್ನು ತಾಯಿ ಕಸ್ತೂರಿ ಅವರ ಮನೆಗೆ ತಲುಪಿಸಿ ಮಾನವೀಯತೆ ಮರೆದಿದ್ದಾರೆ.
ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಯಿ ತಾಳಿ ಅಡವಿಟ್ಟು ಟಿ.ವಿ ತಂದ ವಿಚಾರ ಕೇಳಿ ನನಗೆ ತೀವ್ರ ನೋವಾಯಿತು. ಸ್ನೇಹಿತರ ಮೂಲಕ 50 ಸಾವಿರ ಹಣವನ್ನು ಅವರ ಮನೆಗೆ ತಲುಪಿಸಿದ್ದೇನೆ. ಇಂದು ಬಕ್ರೀದ್ ಹಬ್ಬ. ಜತೆಗೆ ನನ್ನ ಹುಟ್ಟುಹಬ್ಬದ ದಿನ. ಎರಡು ದಿನದ ಹಿಂದೆಯೇ ಯಾರೂ ನನ್ನ ಮನೆ ಬಳಿ ಬರಬೇಡಿ. ಹುಟ್ಟುಹಬ್ಬಕ್ಕಾಗಿ ವಿಶ್ ಮಾಡಲು ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿ ಎಂದು ಕಾರ್ಯಕರ್ತರಿಗೆ ತಿಳಿಸಿದ ಸಂಗತಿಯನ್ನು ಜಮೀರ್ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.