ಬಂದೂರು ತೋರಿಸಿ 1 ಕೋಟಿ ರೂ. ದರೋಡೆ ಮಾಡಿರುವ ಘಟನೆ ದೆಹಲಿಯ ಗುಲಾಬಿ ಬಾಗ್ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೋತಿ ನಗರ ನಿವಾಸಿ ಸುರೇಶ್ ಎಂಬುವವರು ದೂರು ದಾಖಲಿಸಿದ್ದಾರೆ. ಕಮಲೇಶ್ ಎಂಬ ವ್ಯಕ್ತಿ 1 ಕೋಟಿ ರೂ. ಹಣವನ್ನು ಎರಡು ಚೀಲಗಳಲ್ಲಿ ತುಂಬಿ ಚಾಂದಿನಿ ಚೌಕ್ ಗೆ ತಲುಪಿಸಲು ಹೇಳಿದ್ದರು ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
ಸುರೇಶ್ ಅವರು ರಾಕೇಶ್ ಎಂಬುವವರೊಂದಿಗೆ ಆ ಹಣದ ಚೀಲಗಳೊಂದಿಗೆ ಆಟೋದ ಮೂಲಕ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೀರ್ ಬಂದ್ ಬೈರಾಗಿ ಮಾರ್ಗದ ಮೆಟ್ರೋ ಪಿಲ್ಲರ್ ಸಂಖ್ಯೆ 147ರ ಬಳಿ ಬಂದಾಗ, ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಬಂದೂಕು ತೋರಿಸಿ ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.