ಪೂರ್ವ ಲಿಬಿಯಾದಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮ 2 ಡ್ಯಾಂ ಸ್ಫೋಟಗೊಂಡ ಪರಿಣಾಮ ಸಾವಿರಾರು ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಿಬಿಯಾ ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯದ ಮಾಹಿತಿಯಂತೆ 11,300 ಜನ ಸಾವನ್ನಪ್ಪಿದ್ದು, ಈ ಸಂಖ್ಯೆ 20ರಿಂದ 30 ಸಾವಿರಕ್ಕೆ ಏರಿಕೆ ಕಾಣುವ ಭೀತಿ ಆವರಿಸಿದೆ. ‘ಡೇನಿಯಲ್’ ಚಂಡಮಾರುತದ ಪರಿಣಾಮ ಭೀಕರ ಮಳೆ ಸುರಿದು, ನಂತರ ಲಿಬಿಯಾದ ಎರಡು ಡ್ಯಾಂಗಳು ಸ್ಫೋಟವಾಗಿವೆ ಎನ್ನಲಾಗಿದೆ. ಹೀಗಾಗಿ ಭಾರೀ ಪ್ರಮಾಣದ ನೀರು ನುಗ್ಗಿ ಬಂದಿದ್ದು, ರಾತ್ರೋರಾತ್ರಿ ಸಾವಿರಾರು ಜನ ಮೃತಪಟ್ಟರೆ, ಲೆಕ್ಕಕ್ಕೆ ಸಿಗದಷ್ಟು ಜನ ಇದೀಗ ನಾಪತ್ತೆಯಾಗಿದ್ದಾರೆ.
ಹೀಗಾಗಿ ಅಂದಾಜು 20ರಿಂದ 30 ಸಾವಿರ ಜನ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಲಿಬಿಯಾ ನಕ್ಷೆಯನ್ನು ಗಮನಿಸಿದರೆ, ಸಂಪೂರ್ಣ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಡೆರ್ನಾ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಲಿಬಿಯಾ ಆಡಳಿತದಿಂದ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರನ್ನು ಹುಡುಕುವ ಕಾರ್ಯ ಮುಂದುವರೆದಿದೆ. ಎಲ್ಲೆಂದರಲ್ಲಿ ಮನುಷ್ಯರ ಶವ ಬಿದ್ದಿರುವ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಭಾರಿ ಪ್ರಮಾಣದಲ್ಲಿ ನುಗ್ಗಿ ಬಂದ ಮಣ್ಣು ಮಿಶ್ರಿತ ಪ್ರವಾಹದಲ್ಲಿ ಹಲವರ ಶವಗಳು ಹೂತು ಹೋಗಿವೆ.
ಪ್ರವಾಹದ ಪರಿಣಾಮ ರಕ್ಷಣಾ ಸಿಬ್ಬಂದಿ ಡೆರ್ನಾ ನಗರಕ್ಕೆ ತಲುಪಲು ಆಗುತ್ತಿಲ್ಲ. ಜನರ ರಕ್ಷಣೆ ಮಾಡುವುದು ಕೂಡ ಕಷ್ಟವಾಗುತ್ತಿದೆ. ಹೀಗಾಗಿ ಕಟ್ಟಡಗಳ ಅವಶೇಷ ಮತ್ತು ಮಣ್ಣಿನ ಕೆಳಗೆ ಸಿಲುಕಿದವರು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ.