ಹೆಂಡತಿ ನೋಡಲು ಕಪ್ಪಾಗಿದ್ದಾಳೆ ಎಂದು ತಲಾಖ್ ನೀಡಿದ ಪತಿರಾಯ
ಹೆಂಡತಿ ನೋಡಲು ಕಪ್ಪಾಗಿದ್ದಾಳೆ, ಮೈ ಬಣ್ಣ ಕಪ್ಪಾಗಿದೆ ಎನ್ನುವ ಕಾರಣಕ್ಕೆ ಗಂಡ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹಾಗಾಗಿ ಪತ್ನಿ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ.
ಬಾರತದಲ್ಲೀಗ ತ್ರಿವಳಿ ತಲಾಖ್ ನೀಡುವುದನ್ನ ನಿಷೇಧಿಸಲಾಗಿದೆ. ಆದರೂ ಸಹ ಹಲವಾರು ಕಡೆಗಳಲ್ಲಿ ಇಂಥಹ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿವೆ.
ಒಂಬತ್ತು ತಿಂಗಳ ಹಿಂದೆ ಆಲಂ ಎಂಬ ವ್ಯಕ್ತಿಯ ಜೊತೆ ಯುವತಿ ಮದುವೆ ಮಾಡಿಕೊಂಡಿದ್ದಳು. ಮದುವೆ ಮಾಡಿಕೊಂಡಾಗಿನಿಂದ ಕಟ್ಟಿಕೊಂಡ ಹೆಂಡತಿಯ ಮೈಬಣ್ಣ ಕಪ್ಪು ಇದೆ ಎಂದು ಗಂಡ ಕಿರುಕುಳ ಕೊಟ್ಟಿದ್ದಾನೆ. ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಸೊಸೆಯ ಮೈಬಣ್ಣ ಹಾಗೂ ವರದಕ್ಷಿಣೆ ವಿಚಾರವಾಗಿ ಕೀಳು ಮಟ್ಟದಲ್ಲಿ ಮಾತನಾಡ್ತಿದ್ದರಂತೆ. ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾಳೆ. ಈಗ ಆರೋಪಿ ಗಂಡ ಆಕೆಗೆ ತಲಾಖ್ ನೀಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಮೆಟ್ಟಿಲು ಹತ್ತಿರುವ ಮಹಿಳೆ ಗಂಡ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಮುಸ್ಲಿಂ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾಳೆ.