ಫೆಬ್ರವರಿಯಲ್ಲಿ ಕಾಣಬಹುದು ಕೋವಿಡ್ – 19 ಮೂರನೆ ಅಲೆ
ಭಾರತದಲ್ಲಿ ಪ್ರಸ್ತುತ ದೈನಂದಿನದಲ್ಲಿ 7,500 ಕೋವಿಡ್-19 ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಅಕಸ್ಮಾತ್ ಓಮಿಕ್ರಾನ್ ಡೆಲ್ಟಾಗಿಂತ ಪ್ರಬಲ ರೂಪಾಂತರವಾಗಿ ಜನಸಾಮಾನ್ಯರಲ್ಲಿ ಪ್ರಸರಿಸಿದರೆ ಫೆಬ್ರವರಿಯಲ್ಲಿ ಮೂರನೆ ಅಲೆ ಕಾಣಬಹುದು ಎಂದು ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ಮುಂದಿನ 2022 ರ ಆರಂಭಿಕ ವರ್ಷದಲ್ಲಿ ಭಾರತದಲ್ಲಿ ಮೂರನೇ ಅಲೆ ಬರಬಹುದು ಎಂದು ಊಹಿಸಿದ್ದಾರೆ.
ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥರೂ ಆಗಿರುವ ವಿದ್ಯಾಸಾಗರ್, ಭಾರತದಲ್ಲಿ ಮೂರನೆ ಅಲೆ ಓಮಿಕ್ರಾನ್‌ನ ರೂಪಾಂತರದಿಂದ ಕಾಣಿಸಿಕೊಳ್ಳಲಿದೆ ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ ಎಂದು ಹೇಳಿದ್ದಾರೆ. “ಈಗ ದೇಶದಲ್ಲಿ ದೊಡ್ಡ ಪ್ರಮಾಣದ ರೋಗನಿರೋಧಕ ಶಕ್ತಿ ಇರುವುದರಿಂದ ಇದು ಎರಡನೇ ಅಲೆಗಿಂತ ಸೌಮ್ಯವಾಗಿರಲಿದೆ. ಇದೀಗ ನಾವು ಒಂದು ದಿನಕ್ಕೆ 7,500 ಕೋವಿಡ ಪ್ರಕರಣಗಳ ಆಸುಪಾಸಿನಲ್ಲಿದ್ದೇವೆ. ಓಮಿಕ್ರಾನ್ ಡೆಲ್ಟಾಗಿಂತ ಪ್ರಬಲ ರೂಪಾಂತರವಾಗಿ ಪ್ರಸರಿಸಲು ಪ್ರಾರಂಭಿಸಿದ ನಂತರ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುದ್ದಿ ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.
ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಲ್ಲಿ ಪ್ರಾಧ್ಯಾಪಕರೂ ಆಗಿರುವ ವಿದ್ಯಾಸಾಗರ್, ಭಾರತವು ಎರಡನೇ ಅಲೆಯ ರೀತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ನೋಡುವುದು ಅಸಂಭವವಾಗಿದೆ ಎಂದು ಹೇಳಿದ್ದಾರೆ.








