2023ರ ಚುನಾವಣೆ | ರಾಷ್ಟ್ರೀಯ ಪಕ್ಷಗಳಿಗೆ ದಳಪತಿ ಚೆಕ್ ಮೇಟ್
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇದೆ. ಆದ್ರೆ ರಾಜ್ಯದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಈ ಮಧ್ಯೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಪಕ್ಷಗಳಿಗೆ ಚೆಕ್ ಮೇಟ್ ಇಟ್ಟಿದ್ದಾರೆ. 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂದಿನ ವರ್ಷ ಜನವರಿಯಲ್ಲಿ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ 150 ರಿಂದ 170 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದರು. ಅಲ್ಲದೆ 2022ರ ಜನವರಿ 15ರ ಸುಮಾರಿಗೆ ಪಕ್ಷ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ಮಾಹಿತಿ ನೀಡಿದರು.
2022ರ ಜನವರಿ ಎಂದರೆ ಚುನಾವಣೆಗೆ ಸುಮಾರು ಒಂದು ವರ್ಷ ಉಳಿದಿರುತ್ತದೆ. 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೆ ಅವರು ಚುನಾವಣೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಹೆಚ್ ಡಿಕೆ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯವಾಗಿ ಕುಮಾರಸ್ವಾಮಿ ಅವರು ಈ ಬಾರಿ ಪ್ರಾದೇಶಿಕ ಪಕ್ಷದ ಅಗತ್ಯ. ಶಿಕ್ಷಣ, ರಾಜಕೀಯ, ರೈತರ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದನ್ನು ಜನರಿಗೆ ತಿಳಿಸಲು ಮುಂದಾಗಿದ್ದಾರೆ.