ಗದಗ: ಅಪ್ರಾಪ್ತ ಬಾಲಕಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದ ಅಪರಾಧಿಗೆ ಗದಗ (Gadag) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಅಲ್ಲದೇ, ಇದರೊಂದಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಸವದತ್ತಿ ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ದೊಡ್ಡಮನಿ ಎಂಬ ಅಪರಾಧಿ, ಅಪ್ರಾಪ್ತ ಬಾಲಕಿಗೆ ಪ್ರಾಣ ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಸವದತ್ತಿ ತಾಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿ, ಬೈಕ್‌ನಲ್ಲಿ ಹತ್ತಿಸಿಕೊಂಡು ನರಗುಂದ-ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿಯ ಮನೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿ, ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆರೋಪಿ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಅಪರಾಧ 152/2018, ಕಲಂ 376(ಎಬಿ) ಐಪಿಸಿ ಕಲಂ 5(ಎಚ್) ಪೋಕ್ಸೋ ಕಾಯ್ದೆ 2012 ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಶ್ರೀನಿವಾಸ ಸಿ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಲಂ 366ರ ಅಡಿ 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಕಲಂ 506ರ ಅಡಿ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ಕಲಂ 376 (ಎಬಿ) ರೆ/ವಿ ಕಲಂ 5 (ಎಚ್)(ಎಂ), ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಹಾಗೂ 50 ಸಾವಿರ ರೂ ದಂಡ ಕಟ್ಟಲು ಆದೇಶಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪುನ್ನು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ನೀಡಿದ್ದಾರೆ.








