ಟೆಸ್ಟ್ ಸರಣಿ : ದಾಖಲೆ ಬರೆಯುವ ತವಕದಲ್ಲಿ ಅಶ್ವಿನ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಂತರ ಟೀಂ ಇಂಡಿಯಾ ಸ್ಟಾರ್ ಬೌಲರ್ ರವಿಚಂದ್ರನ್ ಅಶ್ವಿನ್ ಬಿಳಿ ಜೆರ್ಸಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಅಂಗವಾಗಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಅಶ್ವಿನ್ ಮತ್ತೆ ಕಿವೀಸ್ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ.
ಕಿವೀಸ್ ವಿರುದ್ಧ ಅಶ್ವಿನ್ ಉತ್ತಮ ದಾಖಲೆ ಹೊಂದಿದ್ದಾರೆ. ಇದುವರೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಅಂಗವಾಗಿ ಅಂತಿಮ ಆಡುವ ಹನ್ನೊಂದರಲ್ಲಿ ಅಶ್ವಿನ್ ಸ್ಥಾನ ಖಚಿತವಾಗಿದೆ.
ಈ ಮಧ್ಯೆ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಹಲವು ದಾಖಲೆಗಳ ಒಡೆಯನಾಗುವ ಸಾಧ್ಯತೆಗಳಿವೆ.
ಅಶ್ವಿನ್ ಇದುವರೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಐದು ಬಾರಿ ಔಟ್ ಮಾಡಿದ್ದಾರೆ.
ಇನ್ನೊಂದು ಬಾರಿ ಕೇನ್ ಅವರನ್ನು ಅಶ್ವಿನ್ ಔಟ್ ಮಾಡಿದ್ರೆ ಟೀಂ ಇಂಡಿಯಾದ ಮಾಜಿ ಬೌಲರ್ ಪ್ರಗ್ಯಾನ್ ಓಜಾ ದಾಖಲೆಯನ್ನು ಮುರಿಯಲಿದ್ದಾರೆ.
ಇನ್ನು ಅಶ್ವಿನ್ ಇದುವರೆಗೆ 79 ಟೆಸ್ಟ್ ಪಂದ್ಯಗಳನ್ನಾಡಿದ್ದು, 413 ವಿಕೆಟ್ ಪಡೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ… ಇನ್ನೂ ನಾಲ್ಕು ವಿಕೆಟ್ ಪಡೆದಿದ್ದರೆ… ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಅಶ್ವಿನ್ ಮುರಿಯಲಿದ್ದಾರೆ.
ಭಜ್ಜಿ ಟೆಸ್ಟ್ನಲ್ಲಿ 417 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅವರು ತಮ್ಮ ವೃತ್ತಿ ಜೀವನದಲ್ಲಿ ಎಂಟು ಬಾರಿ ಈ ಸಾಧನೆ ಮಾಡಿದ್ದಾರೆ. ಅಶ್ವಿನ್ ಎರಡನೇ ಸ್ಥಾನದಲ್ಲಿ (7 ಬಾರಿ) ಮುಂದುವರಿದಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ಅಶ್ವಿನ್ ಹತ್ತು ವಿಕೆಟ್ ಪಡೆದರೆ ಕುಂಬ್ಳೆ ದಾಖಲೆ ಸರಿಗಟ್ಟಲಿದ್ದಾರೆ.