ಮಹಿಳಾ ಪ್ರೊಪೆಸರ್ ಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕರು ಅರೇಸ್ಟ್
ಮಂಗಳೂರು : ಹಿರಿಯ ಪ್ರೊಫೆಸರ್ವೊಬ್ಬರ ಮಾನಹಾನಿಕರ ಪೋಸ್ಟರ್, ಪತ್ರ ಅಂಟಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ, ಮೂವರು ಶಿಕ್ಷಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಬಂಧಿತ ಆರೋಪಿಗಳು. ಇವರು ಬಂಟ್ವಾಳ ಖಾಸಗಿ ಕಾಲೇಜಿನ ಪ್ರೊಫೆಸರ್ ಆಗಿ ಸದ್ಯ ಡೆಪ್ಯುಟೇಶನ್ನಲ್ಲಿರುವ ಮಹಿಳಾ ಪ್ರೊಫೆಸರ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು.
ನಡೆದದ್ದೇನು?: ಮೂವರು ಆರೋಪಿಗಳು ಆರಂಭದಲ್ಲಿ ಮಹಿಳಾ ಪ್ರೊಫೆಸರ್ ಅವರ ವಿರುದ್ಧ ಪರಿಚಯದ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆ ಅಧಿಕಾರಿಗಳಿಗೆ ಆರೋಪಿಗಳು ಮಾನಹಾನಿಕಾರ ಪತ್ರವನ್ನು ಬರೆದಿದ್ದರು. ನಂತರ ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್ನಲ್ಲಿ ಈ ಪ್ರೊಫೆಸರ್ ಫೋನ್ ನಂಬರ್ ಹಾಕಿ ಇವರು ಕಡಿಮೆ ದರದಲ್ಲಿ ವೇಶ್ಯಾವಾಟಿಕೆ ಮಾಡುತ್ತಾರೆ ಎಂದು ಬರೆದಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಅಲ್ಲದೇ, ವಿವಿಧ ಕಡೆ ಅಶ್ಲೀಲವಾಗಿ ಬರೆದು ಪೋಸ್ಟರ್ಗಳನ್ನು ಹಾಕಿದ್ದರು. ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಬಂಟ್ವಾಳ ಖಾಸಗಿ ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರುಗಳಾಗಿದ್ದಾರೆ. ಆದರೆ, ಈ ಕೃತ್ಯವೆಸಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.