ಕೆ ಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು….
ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ 40 ಪರ್ಸೆಂಟೇಜ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೇದಾರನ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪ ಮಾಡಿದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುತ್ತಿಗೇದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದಿದ್ದ ಸಂತೋಷ್ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ನ ರೂಮ್ ನಂಬರ್ 207 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂತೋಷನ ಇಬ್ಬರೂ ಗೆಳೆಯರು ಪಕ್ಕದ ಕೊಠಡಿಯಲ್ಲಿ ಪತ್ತೆಯಾಗಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು, ಎಸ್ ಪಿ ವಿಷ್ಣುವರ್ಧನ್, ಎಎಸ್ಪಿ ಸಿದ್ಧಲಿಂಗಪ್ಪ ಮತ್ತು ಫೊರೆನ್ಸಿಕ್ ತಜ್ಞರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಸಚಿವರ ವಿರುದ್ಧ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ ಎಂದು ಮೆಸೆಜೆ ಮಾಡಿದ್ದಾರೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು , ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ.