ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಪ್ರಮುಖ ಮಾರ್ಗಗಳಲ್ಲಿ ಸುಮಾರು 50 ಲಕ್ಷ ರೂ. ಮೌಲ್ಯದ ದೀಪಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಅಯೋಧ್ಯೆಯ ಭಕ್ತಿಪಥ ಮತ್ತು ರಾಮಪಥದಲ್ಲಿ 50 ಲಕ್ಷ ರೂ. ಮೌಲ್ಯದ ದೀಪಗಳನ್ನು ಕಳ್ಳತನ ಮಾಡಲಾಗಿದೆ. ಸುಮಾರು 3,800 ಬಿದಿರಿನ ದೀಪಗಳು ಹಾಗೂ 36 ಗೋಬೋ ಪ್ರೊಜೆಕ್ಟರ್ ಗಳು ಕಾಣೆಯಾಗಿವೆ.
ಖಾಸಗಿ ಸಂಸ್ಥೆಗಳಾದ ಯಶ್ ಎಂಟರ್ ಪ್ರೈಸಸ್ ಮತ್ತು ಕೃಷ್ಣಾ ಆಟೋಮೊಬೈಲ್ಸ್ ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿಪಥದಲ್ಲಿ 96 ಗೋಬೋ ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಿದ್ದವು. ಭಕ್ತಿ ಪಥವು ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಾಗಿದೆ. ಇದು ಶೃಂಗಾರ್ ಘಾಟ್ ನ್ನು ಹನುಮಾನ್ ಗರ್ಹಿ ಮತ್ತು ಅಂತಿಮವಾಗಿ ದೇವಸ್ಥಾನಕ್ಕೆ ಸಂಪರ್ಕಿಸುತ್ತದೆ.
ಮತ್ತೊಂದು ಪ್ರಮುಖ ಮಾರ್ಗವಾದ ರಾಮಪಥ, 13 ಕಿಮೀ ಉದ್ದದ ಹೆದ್ದಾರಿಯಾಗಿದ್ದು, ಅದು ಸದಾತ್ ಗಂಜ್ ನ್ನು ನಯಾ ಘಾಟ್ಗೆ ಸಂಪರ್ಕಿಸುತ್ತದೆ. ಪ್ರಯಾಣಿಕರು ನೇರವಾಗಿ ರಾಮಮಂದಿರಕ್ಕೆ ಪ್ರಯಾಣಿಸಲು ದಾರಿ ಮಾಡಿಕೊಡುತ್ತದೆ.
ಖಾಸಗಿ ಸಂಸ್ಥೆಗಳು ಅಯೋಧ್ಯೆಯ ಅತ್ಯಂತ ಭದ್ರತಾ ಪ್ರದೇಶದಲ್ಲಿರುವ ಭಕ್ತಿಪಥ ಮತ್ತು ರಾಮಪಥದಲ್ಲಿ ಅಳವಡಿಸಲಾದ 50 ಲಕ್ಷಕ್ಕೂ ಅಧಿಕ ಮೌಲ್ಯದ 3,800 ಬಿದಿರು ಮತ್ತು 36 ಪ್ರೊಜೆಕ್ಟರ್ ಲೈಟ್ಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಅವು ಕಳ್ಳತನವಾಗಿವೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.