ಇಂದು ರಾಜ್ಯದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು ಪ್ರತ್ಯೇಕ ಪ್ರಕರಣಗಳಲ್ಲಿ 6 ಜನ ಸಾವನ್ನಪ್ಪಿ 10ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹೊರವಲಯದಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿ ಬಳಿ ಖಾಸಗಿ ಬಸ್, ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಖಾಸಗಿ ಬಸ್ ನಲ್ಲಿದ್ದ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಾಸನದ ಸಂಕೇನಹಳ್ಳಿ ಗ್ರಾಮದ ಬಳಿ ಈ ನಡೆದಿದ್ದು, 65 ವರ್ಷದ ಪುಟ್ಟರಾಜು, 54 ವರ್ಷದ ಭಾರತಿ ಮೃತ ದಂಪತಿಯಾಗಿದ್ದಾರೆ.
ನಿಂತಿದ್ದ ಬಸ್ಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ.ಹೊಸಹಳ್ಳಿ ಬಳಿ ನಡೆದಿದೆ. ವೀರೇಶ್, ಶಶಿಕಲಾ ಸಾವನ್ನಪ್ಪಿದ ದುರ್ದೈವಿಗಳು. ಮೃತರು ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವರು ಎಂದು ತಿಳಿದು ಬಂದಿದೆ.