ಬೆಂಗಳೂರು: ಇತ್ತೀಚೆಗೆ ಸೈಬರ್ ಖದೀಮರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಇಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಬರೋಬ್ಬರಿ 63 ಲಕ್ಷ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಓರ್ವ ವೈದ್ಯ ಹಾಗೂ ಇಬ್ಬರು ಇಂಜಿನಿಯರ್ ಗಳಿಗೆ ಸೈಬರ್ ಖದೀಮರು ವಂಚಿಸಿದ್ದಾರೆ. ನಿಷೇಧಿತ ವಸ್ತುಗಳು ಕೊರಿಯರ್ ಬಂದಿರುವುದಾಗಿ ಬೆದರಿಸಿ ಬ್ಯಾಂಕ್ ಖಾತೆ ಡಿಟೈಲ್ಸ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೋರಮಂಗಲದ ವೈದ್ಯೆ ಗುರುವಾರ ಆಗ್ನೇಯ ಸೈಬರ್ ಕ್ರೈಂ ಪೊಲೀಸರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ. ಕೊರಿಯರ್ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ನಿಷೇಧಿತ ವಸ್ತುಗಳ ಪಾರ್ಸೆಲ್ ಇದೆ ಎಂದು ಹೇಳಿದ್ದಾರೆ. ಆನಂತರ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದ್ದಾರೆ. ಆಗ ಆ ವಂಚಕರು, ಬ್ಯಾಂಕ್ ಖಾತೆಗಳನ್ನು ಕ್ರಾಸ್ ಚೆಕ್ ಮಾಡುವ ನೆಪದಲ್ಲಿ 7.6 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೇಗೂರಿನ 48 ವರ್ಷದ ವ್ಯಕ್ತಿಗೆ ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ಟೈಲ್ಸ್ ಪಡೆದು 29.6 ಲಕ್ಷ ರೂ. ವಂಚಿಸಿದ್ದಾಗಿ ತಿಳಿದು ಬಂದಿದೆ. ದೇವರಬೀಸನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಗೆ ಕೂಡ ಇದೇ ರೀತಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಸದ್ಯ ಖದೀಮರಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.