27 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಸ್ಪರ್ಧೆ- 2023ನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಹು ನಿರೀಕ್ಷಿತ ವಿಶ್ವ ಸುಂದರಿ ಸ್ಪರ್ಧೆಯ 71ನೇ ಆವೃತ್ತಿಯು ಭಾರತದಲ್ಲಿ ನಡೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ, ಈ ವರ್ಷದ ನವೆಂಬರ್ ತಿಂಗಳಲ್ಲಿ ದೇಶದಲ್ಲಿಯ ಕಾರ್ಯಕ್ರಮ ನಡೆಯಲಿದೆ. ಭಾರತವು ಕೊನೆಯದಾಗಿ 1996ರಲ್ಲಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು.
71ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಅನನ್ಯ ಮತ್ತು ವೈವಿಧ್ಯಮಯ ಸಂಸ್ಕೃತಿ, ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಅದ್ಭುತ ಸ್ಥಳಗಳನ್ನು ಪ್ರಪಂಚದ ಇತರರೊಂದಿಗೆ ಹಂಚಿಕೊಳ್ಳಲು ನಾವೆಲ್ಲ ಕಾಯುತ್ತಿದ್ದೇವೆ. 71ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ ರೌಂಡ್ ಭಾರತದಲ್ಲಿ ನಡೆಯಲಿದ್ದು, 130 ರಾಷ್ಟ್ರೀಯ ಚಾಂಪಿಯನ್ಗಳ ಸಾಧನೆಗಳನ್ನು ಪ್ರದರ್ಶಿಸುತ್ತೇವೆ ಎಂದು ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿದ್ದಾರೆ.
130ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಬರೋಬ್ಬರಿ 1 ತಿಂಗಳ ಕಾಲ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆ, ಪ್ರತಿಭಾ ಪ್ರದರ್ಶನ, ಕ್ರೀಡಾ ಸವಾಲುಗಳು ಸೇರಿದಂತೆ ಕಠಿಣ ಸ್ಪರ್ಧೆಗಳ ಸರಣಿಯನ್ನು ಇದು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.