ಸಾಯಿ ಧರ್ಮ ತೇಜ್ ಹೆಸರಲ್ಲಿ ಹಣಕ್ಕೆ ಬೇಡಿಕೆಯಿಟ್ಟ ವಂಚಕರು – ಎಚ್ಚರಿಕೆಯಿಂದಿರಿ ಎಂದ ನಟ
ಹೈದರಾಬಾದ್: ಸೈಬರ್ ಕ್ರೈಮ್ ಗಳ ಪ್ರಮಾಣ ದಿನೇ ದಿನೇ ಹೆಚ್ಚಾಗ್ತಾಯಿದ್ದು, ಇತ್ತೀಚೆಗೆ ಸೆಲೆಬ್ರಿಟಿಗಳು ರಾಜಕಾರಣಿಗಳ ಸೋಗಿನಲ್ಲಿಯೇ ಸೈಬರ್ ಕಳ್ಳರು ಜನರಿಗೆ ವಂಚನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದ್ರಂತೆ ತೆಲುಗಿನ ಖ್ಯಾತ ನಟ ಸಾಯಿ ಧರ್ಮ ತೇಜ್ ಅವರ ಹೆಸರಿನಲ್ಲಿ ಕೆಲ ಸೈಬರ್ ಕಳ್ಳರು ಜನರ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ನಟನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವ ದಂಧೆಗೆ ಇಳಿದಿದ್ದಾರೆ. ಇದು ನಟ ಧರ್ಮ ತೇಜ್ ಅವರ ಗಮನಕ್ಕೂ ಬಂದಿದ್ದು, ಅಂತಹವರ ವಿರುದ್ಧ ಸಾಯಿ ತೇಜ್ ಗರಂ ಆಗಿದ್ದಾರೆ.
ಈ ಬಗ್ಗೆ ತನ್ನ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಸಾಯಿ ತೇಜ್ ದಯವಿಟ್ಟು ಯಾರೂ ಮೋಸ ಹೋಗಬೇಡಿ. ಇಂತಹ ವಂಚಕರ ಜಾಲಗಳ ವಿರುದ್ಧ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಅಲ್ಲದೇ ವಂಚಕರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿರುವ ನಟ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ರವಾನಿಸಿದ್ಧಾರೆ.