ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!
ಬೆಂಗಳೂರು : ಹೆಗಲ ಮೇಲೆ ಕೈ ಹಾಕಿಕೊಳ್ಳಲು ಬಂದ ಬೆಂಬಲಿಗನ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟಾರ್ ಅಂತಾ ಬಾರಿಸಿರುವ ಘಟನೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಟ್ವಟ್ಟರ್ ನಲ್ಲಿ ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?
ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ.
ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿ.ಕೆ.ಶಿವಕುಮಾರ್ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!? ಎಂದು ಪ್ರಶ್ನಿಸಿದೆ.
ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿ.ಕೆ.ಶಿವಕುಮಾರ್ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು ? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ?
ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. ‘ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ’ ಎಂದು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲನ್ನು ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು?
ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್ ಮೊದಲು ಅರಿತುಕೊಳ್ಳಬೇಕು. ಈ ಹಿಂದೆ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಮಹಾನಾಯಕ ಡಿಕೆಶಿಯವರೇ ಭೂಗತ ಜಗತ್ತಿನ ರೀತಿಯ ವರ್ತನೆಗಳು ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ ಎಂದು ಟೀಕೆ ಮಾಡಿದೆ.