ಬೆಂಗಳೂರು : ಆನ್ ಲೈನ್ ಕಾರ್ಯಕ್ರಮ ನಮ್ಮ ಐಡಿಯಾ, ಇದನ್ನು ಬಿಜೆಪಿ ನಕಲು ಮಾಡಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಕಲು ಮಾಡುತ್ತಿದ್ದಾರೆ, ಸ್ವಂತ ಕಾರ್ಯಕ್ರಮಗಳನ್ನು ಮಾಡಲು ಆಗದೆ ನಮ್ಮನ್ನು ನಕಲು ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಅನುಮತಿ ನಿರಾಕರಿಸಿ, ಬಿಜೆಪಿ ನಮ್ಮದೇ ರೀತಿಯಲ್ಲಿ ವರ್ಚುವಲ್ ಕಾರ್ಯಕ್ರಮ ಮಾಡುತ್ತಿದೆ. ಅದೇ ದಿನ ಅದೇ ಸಮಯಕ್ಕೆ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿ ಅವರು ಕಾರ್ಯಕ್ರಮ ಮಾಡುವುದಕ್ಕೆ, ರಾಷ್ಟ್ರೀಯ ಪ್ರಕೃತಿ ವಿಕೋಪ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು.
ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕೂರಲ್ಲ. ವಿಧಾನ ಪರಿಷತ್ ಚುನಾವಣೆ ಬಳಿಕ ರಾಜಕೀಯೇತರ ಪ್ರವಾಸ ಮಾಡುತ್ತೇನೆ. ಕೊರೋನಾದಲ್ಲಿ ಜನರ ಕಷ್ಟಗಳೇನು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ಯಾಕೇಜ್ ತಲುಪಿದ್ಯಾ ಎಂದು ಕೇಳುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈ ಪ್ರವಾಸದಲ್ಲಿ ಭಾಗವಹಿಸುತ್ತಾರೆ. ಬಾವುಟ ಬಳಸಲ್ಲ. ಪ್ರತಿಪಕ್ಷದ ಅಧ್ಯಕ್ಷನಾಗಿ ಈ ಸಂದರ್ಭದಲ್ಲಿ ಜನರ ಪರಿಸ್ಥಿತಿ ಹಾಗೂ ಸಮಸ್ಯೆ ಅರಿಯುವುದು ನನ್ನ ಕರ್ತವ್ಯ.
ನನಗೆ ಮುಖ್ಯಮಂತ್ರಿಯವರ ಪ್ರೀತಿ ಬೇಕಿಲ್ಲ. ಜನರ ಪ್ರೀತಿ ಸಾಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರತಿಜ್ಞಾ ಕಾರ್ಯಕ್ರಮ ಅನುಮತಿ ನಿರಾಕರಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.