ಐಪಿಎಲ್ 2025ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನದ ಹುಮ್ಮಸ್ಸಿನಲ್ಲಿ ಇಡೀ ರಾಜ್ಯದ ಅಭಿಮಾನಿಗಳು ಮುಳುಗಿರುವ ಈ ಹೊತ್ತಿನಲ್ಲಿ, ವಿಶೇಷ ಮನವಿ ಮಾಡುವ ಮೂಲಕ ಒಬ್ಬ ಅಭಿಮಾನಿ ಸುದ್ದಿಯಲ್ಲಿ ಇದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿವಾನಂದ ಎಂಬ RCB ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳುಹಿಸಿದ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪತ್ರದಲ್ಲಿ, RCB ಈ ಬಾರಿ ಫೈನಲ್ಗೆ ಪ್ರವೇಶಿಸಿ ಕಪ್ ಗೆದ್ದರೆ, ಆ ದಿನವನ್ನು ‘RCB ಅಭಿಮಾನಿಗಳ ಹಬ್ಬ’ದಂತೆ ಪರಿಗಣಿಸಿ, ರಾಜ್ಯಮಟ್ಟದಲ್ಲಿ ಒಂದು ದಿನ ರಜೆ ಘೋಷಿಸಬೇಕೆಂದು ಮನವಿ ಮಾಡಲಾಗಿದೆ. ಈ ವಿನೂತನ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ತಮಾಷೆಯಾಗಿ ಕಾಣುತ್ತಿದ್ದರೆ, ಇನ್ನು ಕೆಲವರು ಅದನ್ನು ಸಂಪೂರ್ಣ ಬೆಂಬಲಿಸುತ್ತಿರುವುದು ಗಮನಾರ್ಹವಾಗಿದೆ.
RCB ತಂಡ ಈ ಬಾರಿ ಫೈನಲ್ ಗೆ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ ಕಪ್ ನಮ್ಮದೇ ಎಂಬ ಘೋಷಣೆ ಈ ತಂಡದ ಬೆಂಬಲಿಗರಲ್ಲಿ ಹುಮ್ಮಸ್ಸುಂಟುಮಾಡಿದೆ.
ಶಿವಾನಂದ ಅವರ ಪತ್ರದಲ್ಲಿ, RCB 17 ವರ್ಷಗಳ ಹೋರಾಟದ ಬಳಿಕ ಈ ಬಾರಿ ಕಪ್ ಗೆಲ್ಲುವ ಹತ್ತಿರವಿದೆ. ಈ ಜಯವನ್ನು ಸಾಧಿಸಿದರೆ ಅದು ರಾಜ್ಯದ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ RCB ಅಭಿಮಾನಿಗಳಿಗೆ ಒಂದು ದಿನದ ರಜೆ ಘೋಷಣೆ ಮಾಡುವ ಮೂಲಕ ಈ ಖುಷಿಯನ್ನು ಹಬ್ಬವಾಗಿ ಆಚರಿಸಲು ಅವಕಾಶ ಕೊಡಿ, ಎಂಬ ಬೇಡಿಕೆ ಸೇರಿದೆ.
ಈ ಪತ್ರಕ್ಕೆ ಸಿಎಂ ಕಚೇರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇದು ಈಗಾಗಲೇ ಜೋರಾಗಿ ಚರ್ಚೆಗೆ ಗ್ರಾಸವಾಗಿದೆ.
RCB ಕಪ್ ಗೆದ್ದರೆ ನಿಜವಾಗಿಯೂ ರಜೆ ಸಿಗುತ್ತದಾ ಅಥವಾ ಇಲ್ಲವೇ ಎಂಬುದು ಈಗ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿದೆ..








