ಚಿತ್ರದುರ್ಗ: ಚಾಕ್ಲೇಟ್ ಎಂದು ಭಾವಿಸಿ ಮಾತ್ರೆ ಸೇವಿಸಿದ್ದ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಕಡಬನಕಟ್ಟೆ ಗ್ರಾಮದ ವಸಂತ್ ಕುಮಾರ್ ಹಾಗೂ ಪವಿತ್ರ ದಂಪತಿಯ ಪುತ್ರ ಹೃತ್ವಿಕ್(4) ಈ ರೀತಿ ಮಾತ್ರೆ ಸೇವಿಸಿ ಸಾವನ್ನಪ್ಪಿದ ದುರ್ದೈವಿ. ಬಾಲಕ ಅಸ್ವಸ್ಥಗೊಳ್ಳುತ್ತಿದ್ದಂತೆಯೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಮಗುವಿನ ತಾಯಿಗೆ 3 ಶಸ್ತ್ರ ಚಿಕಿತ್ಸೆಗಳು ಆಗಿದ್ದವು. ಹೀಗಾಗಿ ಅವರು ಮನೆಯಲ್ಲಿ ಮಾತ್ರೆ ಇಟ್ಟಿದ್ದರು. ಇವುಗಳನ್ನೇ ಸೇವಿಸಿದ ಮಗು ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ತುರುವನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.








