ಮುಂಬೈ: ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬಾತ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದಲ್ಲಿನ ತಲೋಜಾ ಜೈಲು (Taloja Central Jail) ಆವರಣದಲ್ಲಿ 19 ವರ್ಷದ ಯುವತಿಯ ಮೃತದೇಹವೊಂದು ಪತ್ತೆಯಾಗಿತ್ತು. ಸ್ಥಳಕ್ಕೆ ಪೊಲೀಸರ ತಂಡ ಆಗಮಿಸಿ, ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿತ್ತು.
ನವಿ ಮುಂಬೈನ (Mumbai) ಕಲಾಂಬೋಲಿ ಪ್ರದೇಶದ ನಿವಾಸಿ 19 ವರ್ಷದ ಯುವತಿ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಮನೆಯವರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ, ಅದೇ ದಿನ ಪೊಲೀಸರಿಗೆ ಆತ್ಮಹತ್ಯೆ ಪ್ರಕರಣವೊಂದರ ಮಾಹಿತಿ ಸಿಕ್ಕಿತ್ತು.
ಪೊಲೀಸರು ಸ್ಥಳಕ್ಕಾಗಮಿಸಿದಾಗ ಯುವಕನ ಮೃತದೇಹದ ಬಳಿ ಫೋನ್ನಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ನಂತರ ಪೊಲೀಸರು ಆತ್ಮಹತ್ಯೆ ಪತ್ರದಲ್ಲಿ ಸಿಕ್ಕ ಸುಳಿವು ಆಧರಿಸಿ ಯುವತಿಯ ಶವಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಪೊಲೀಸರು ಡ್ರೋನ್ ಸಹಾಯದಿಂದ ಹುಡುಕಿದಾಗ ಖಾರ್ಘರ್ ಅರಣ್ಯದಲ್ಲಿ ಯುವತಿಯ ಶವ ಪತ್ತೆಯಾಗಿತ್ತು ಎನ್ನಲಾಗಿದೆ.
ವೈಷ್ಣವಿ ಮನೋಹರ್ ಬಾಬರ್ (19) ಮತ್ತು ವೈಭವ್ ಬುರುಗಲ್ಲೆ (24) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಯುವತಿ ದೂರವಾಗಲು ಬಯಸಿದ್ದಳು. ಹೀಗಾಗಿ ಜಗಳ ನಡೆದಿತ್ತು. ಕೋಪದಲ್ಲಿ ಯುವಕ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆ ನಂತರ ಪತ್ರ ಬರೆದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.