ಆನೇಕಲ್: ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆಯನ್ನೇ ಮರೆತಿರುವಂತೆ ತೋರುತ್ತಿದೆ. ವಿದ್ಯೆ ಹೆಚ್ಚಾದಂತೆ ಸಂಸ್ಕಾರ ಮರೆಯಾಗುತ್ತ ಸಾಗುತ್ತಿದೆ. ಹೆತ್ತು- ಹೊತ್ತು ಬೆಳೆಸಿದ ತಂದೆ-ತಾಯಿಗಳನ್ನೇ ಇಂದು ಮಕ್ಕಳು ಬೀದಿಗೆ ತಳ್ಳುತ್ತಿರುವ ಅಮಾನವೀಯ ಘಟನೆಗಳು ನಡೆಯುತ್ತಿವೆ.
ಹೆತ್ತ ಮಗಳೇ ತನ್ನ ಪತಿಯೊಂದಿಗೆ ಸೇರಿಕೊಂಡು ತನ್ನ ವಯಸ್ಸಾದ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ನೋಡಿಕೊಳ್ಳಲು ಆಗದೆ, ವೃದ್ಧ ತಾಯಿಯನ್ನು ಕಾರಿನಿಂದ ಇಳಿಸಿ ಮಗಳು ಮತ್ತು ಅಳಿಯ ಪರಾರಿಯಾಗಿದ್ದಾರೆ.
ದೊಮ್ಮಸಂದ್ರದಲ್ಲಿ ಮಗಳು ಆಶಾರಾಣಿ, ಅಳಿಯ ಮಂಜುನಾಥ್ ರೊಂದಿಗೆ ಓಬಮ್ಮ ವಾಸಿಸುತ್ತಿದ್ದರು. ಆದರೆ, ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಹೆತ್ತ ತಾಯಿ ಎಂಬುವುದನ್ನೇ ಮರೆತು ದೇಗುಲವೊಂದರ ಬಳಿ ಕರೆತಂದು ಬಿಟ್ಟು ಹೋಗಿದ್ದಾರೆ.
ಚಳಿಯಲ್ಲಿ ಮಲಗಿದ್ದ ವೃದ್ಧೆ ನೋಡಿ ಗ್ರಾಮಸ್ಥರು ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ವೃದ್ಧೆ ಎಲ್ಲ ವಿಷಯವನ್ನು ಹೇಳಿದ್ದಾರೆ. ನಂತರ ವೃದ್ಧೆಯನ್ನು ಗ್ರಾಮಸ್ಥರು ರಕ್ಷಿಸಿ ಬನ್ನೇರುಘಟ್ಟದ ಏರ್ಹ್ಯೂಮಟೇರಿಯನ್ ಹೋಮ್ಸ್ ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಕೂಡ ಮಾಡಿದ್ದು, ಕಾಲು ಮುರಿದು, ಗಾಯಗಳಾಗಿವೆ ಎಂದು ತಿಳಿದು ಬಂದಿದೆ.








