ಯಶ್ ನೋಡಲು ಆಗಮಿಸುತ್ತಿದ್ದ ಅಭಿಮಾನಿಯೊಬ್ಬ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಗದಗ ಜಿಲ್ಲೆಯಲ್ಲಿ ಮೂವರು ಯುವಕರು ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಗಾಯಾಳುಗಳನ್ನು ನೋಡಲು ನಟ ಯಶ್ ಗದಗದ ಜಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ನೆಚ್ಚಿನ ನಟನನ್ನು ನೋಡಲು ಬರುತ್ತಿದ್ದ ಅಭಿಮಾನಿ ನಿಖಿಲ್ ಗೌಡ (22) ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಸಾವನ್ನಪ್ಪಿದ್ದರು. ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಆರೋಗ್ಯ ವಿಚಾರಿಸುವುದಕ್ಕಾಗಿ ಜಿಮ್ಸಾ ಆಸ್ಪತ್ರೆಗೆ ಆಗಮಿಸಿದ್ದರು. ಈ ವಿಚಾರ ಗೊತ್ತಾಗಿ ಆಸ್ಪತ್ರೆಗೆ ಬರುವಾಗ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ.
ಗದಗ ನಗರದ ತೇಜಾನಗರದಲ್ಲಿ ಈ ದುರಂತ ಘಟನೆ ನಡೆದಿದೆ. ಮೃತಪಟ್ಟ ನಿಖಿಲ್ ಗೌಡ (22) ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ ಎನ್ನಲಾಗಿದ್ದು, ಮತ್ತೋರ್ವ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.