ಬಿಜೆಪಿಯ ಮಾಜಿ ಶಾಸಕ ಪ್ರತಿಭಟನೆ ಸಂದರ್ಭದಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಇಂದು ಬಿಜೆಪಿ ಪಕ್ಷದ ವತಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗತ್ತಿದೆ. ಹೀಗಾಗಿ ಶಿವಮೊಗ್ಗದಲ್ಲಿ ಕೂಡ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆಯೇ ವಿಧಾನ ಪರಿಷತ್ ನ ಬಿಜೆಪಿಯ ಮಾಜಿ ಸದಸ್ಯ ಭಾನುಪ್ರಕಾಶ್(69) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಪ್ರತಿಭಟನೆಯಲ್ಲಿ ಅಣಕು ಶವಯಾತ್ರೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಘುಪತಿ ರಾಘವ ಘೋಷಣೆಯನ್ನು ಭಾನುಪ್ರಕಾಶ್ ಹೇಳುತ್ತಿದ್ದರು. ಇದಕ್ಕೂ ಮುನ್ನ ಮೌನಾಚರಣೆ ಮಾಡಿಸಿದ್ದರು. ಈ ವೇಳೆ ಅವರಿಗೆ ಸುಸ್ತಾದಂತೆ ಕಂಡಿದೆ. ಆಗ ವಾಹನದಲ್ಲಿ ಹೋಗಿ ಕುಳಿತಿದ್ದಾರೆ. ಅಷ್ಟರಲ್ಲಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೈದ್ಯರು ಅವರ ಸಾವನ್ನು ದೃಢಪಡಿಸಿದ್ದಾರೆ.
ಭಾನುಪ್ರಕಾಶ್ ಎಂಎಲ್ ಸಿ ಆಗಿದ್ದವರು. ಬಿಜೆಪಿ ರಾಜ್ಯಾಧ್ಯಕ್ಷ, ಪ್ರಕೋಷ್ಠಗಳ ಸಂಚಾಲಕ, ಹಾಗೂ ಜಿಲ್ಲಾ ಬಿಜೆಪಿ ಪ್ರಮುಖರಾಗಿದ್ದರು. ಅವರ ಮೃತ ದೇಹವನ್ನು ಅವರ ಸ್ವಂತ ಊರಾದ ಮತ್ತೂರಿಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.