25 ಸಾವಿರ ರೂ ಸಲುವಾಗಿ ಸ್ನೇಹಿತನ ಹತ್ಯೆ ಮಾಡಿದ ಸ್ನೇಹಿತ Saaksha Tv
ಬೆಂಗಳೂರು ಗ್ರಾಮಾಂತರ: ಸ್ನೇಹಿತನೇ ಸ್ನೇಹಿತನ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ವ್ಯಾಪ್ತಿಯ ದೇವಣ್ಣನ ಪಾಳ್ಯ ಎಂಬಲ್ಲಿ ನಡೆದಿದೆ.
28 ವರ್ಷದ ಮಂಜುನಾಥ್ ಮೃತ ದುರ್ದೈವಿ. ಸ್ನೇಹಿತ ಸಂತೋಷ್ ಹತ್ಯೆ ಮಾಡಿದ ಆರೋಪಿ. ಮೃತ ಮಂಜುನಾಥ್ ಹಾಗೂ ಆರೋಪಿ ಸಂತೋಷ್ ಇಬ್ಬರೂ ಸ್ನೇಹಿತರಾಗಿದ್ದರು. ಮಂಜುನಾಥ್ ಹಾಲು ವ್ಯಾಪಾರ ಮಾಡುತ್ತಿದ್ದು, ಸಂತೋಷ್ ಕೃಷಿಕನಾಗಿದ್ದ. ಕೆಲದಿನಗಳ ಹಿಂದೆ ಸಂತೋಷ್‌ಗೆ ಆರ್ಥಿಕವಾಗಿ ಸಮಸ್ಯೆ ಶುರುವಾಗಿತ್ತು. ಹೀಗಾಗಿ ಮಂಜುನಾಥ ತನ್ನಲ್ಲಿದ್ದ 25 ಸಾವಿರ ರೂಪಾಯಿಗಳನ್ನು ಸಾಲವಾಗಿ ಗೆಳೆಯ ಸಂತೋಷ್‌ಗೆ ಕೊಟ್ಟಿದ್ದ.
ಸಾಲ ಪಡೆದ ಸಂತೋಷ್ ಸಾಲವನ್ನು ಮಂಜುನಾಥ್‌ಗೆ ವಾಪಸ್ ಮಾಡಿರಲಿಲ್ಲ. ಹಣ ವಾಪಸ್ ಬೇಕು ಅಂತ ಮಂಜುನಾಥ್‌ನೇ ಸಾಕಷ್ಟು ಸಲ ಕೇಳಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಆಗಾಗ ಗಲಾಟೆ, ಜಗಳ ನಡೆಯುತ್ತಿತ್ತು. ಕಳೆದ 10ನೇ ತಾರೀಖಿನಂದು ರಾತ್ರಿ ದೇವಣ್ಣನಪಾಳ್ಯದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮಂಜುನಾಥ್, ಸಂತೋಷ್ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ಆಗ ಬೈಕ್‌ನಲ್ಲಿದ್ದ ಮಂಜುನಾಥ್ ಮೇಲೆ ಸಂತೋಷ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಘಟನೆಯಲ್ಲಿ ಮಂಜುನಾಥ್ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು ತಲೆ ಒಳಗೆ ಭಾರೀ ಹಾನಿಯಾಗಿದೆ ಅಂತ ಹೇಳಿದ್ದರು. ಮರುದಿನ ಬೆಳಿಗ್ಗೆ ಮಂಜುನಾಥ್ ಹಾಸಿಗೆಯಿಂದ ಕೆಳಗೆ ಬಿದ್ದು, ತೀವ್ರ ಗಾಯದಿಂದ ನರಳಿ ಪ್ರಜ್ಞೆ ಕಳೆದುಕೊಂಡರು. ಆದಾದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದರು ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲೇ ಮಂಜುನಾಥ್ ಕೊನೆಯುಸಿರೆಳೆದರು.
ಮಗನನ್ನು ಕಳೆದುಕೊಂಡ ಹೆತ್ತವರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಮಂಜುನಾಥ್ ತಂದೆ ಆರೋಪಿ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.









