ರಾಮನಗರ: ಬರೋಬ್ಬರಿ 30 ಕಾಡಾನೆಗಳಿದ್ದ ಹಿಂಡು ರೈತರನ್ನು ಬೆನ್ನಟ್ಟಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮವೊಂದರ ಬಳಿ ತೆರಳುತ್ತಿದ್ದ ರೈತರಿಬ್ಬರನ್ನು ಸುಮಾರು 30 ಆನೆಗಳ (elephant) ಹಿಂಡು ಬೆನ್ನಟ್ಟಿದೆ. ಕೂಡಲೇ ಅವರಿಬ್ಬರು ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ.
ತಮ್ಮ ಹೊಲದಲ್ಲಿ ಆಗಿದ್ದ ಹಾನಿ ನೋಡಲು ರೈತರು ತೆರಳಿದ್ದರು. ಈ ವೇಳೆ ಕಾಡಾನೆಗಳ ಹಿಂಡು ಏಕಾಏಕಿ ನುಗಿದೆ. ರೈತರಿಬ್ಬರು ಬೈಕ್ ಬಿಟ್ಟು ಬೆಟ್ಟದ ಕಡೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇತ್ತ ಸಿಟ್ಟಿನಲ್ಲಿ ಕಾಡಾನೆಗಳ ಹಿಂಡು ಬೈಕ್ ಪುಡಿ ಮಾಡಿವೆ.
ಬನ್ನೇರುಘಟ್ಟದ ಬಿಳಿಕಲ್ ಅರಣ್ಯ ಕಡೆಯಿಂದ ಕಾಡಾನೆ ಗುಂಪು ಆಗಮಿಸಿದ್ದು, ಆನೆಗಳ ಪೈಕಿ ಮರಿಗಳೇ ಹೆಚ್ಚಿದ್ದವು. ಕನಕಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆ ನಾಶ ಮಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿನೆಡೆಗೆ ಓಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲವು ಬಾರಿ ರೈತರು ಮನವಿ ಮಾಡಿದ್ದರು. ಹೀಗಾಗಿ ಅರಣ್ಯ ಇಲಾಖೆ ಬೆಟ್ಟೇಗೌಡನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.