ಸಾರ್ವಜನಿಕ ಸ್ಥಳದಲ್ಲೇ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಪತಿ
ಬೆಳಗಾವಿ: ಸಾರ್ವಜನಿಕವಾಗಿ ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಕೋಟೆ ಕೆರೆ ಬಳಿ ನಡೆದಿದೆ.
ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್ (27) ಮೃತ ದುರ್ದೈವಿ. ಮಂಜೂರ್ ಇಲಾಹಿ ನದಾಫ್ (34) ಕೊಲೆ ಆರೋಪಿ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರಿಬ್ಬರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಂಜೂರ್-ಹೀನಾಕೌಸರ್ ಜಗಳವಾಡಿಕೊಳ್ಳುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಹೀನಾಕೌಸರ್ ಎಂಟು ತಿಂಗಳ ಹಿಂದೆ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್ಗೆ ಹಾಜರಾಗಿ ಹೀನಾಕೌಸರ್ ಕೋಟೆ ಕೆರೆ ಬಳಿ ನಡೆದುಕೊಂಡು ತವರು ಮನೆಗೆ ಹಿಂತಿರುಗುತ್ತಿದ್ದರು.
ಇದನ್ನು ಗಮನಿಸಿದ ಹೀನಾಕೌಸರ್ನನ್ನು ಮಂಜೂರ್ ಅಡ್ಡಗಟ್ಟಿದ್ದಾನೆ. ಕೆಲ ಹೊತ್ತು ಹೀನಾಕೌಸರ್ ಜೊತೆಗೆ ವಾಗ್ವಾದವನ್ನೂ ಮಾಡಿದ್ದಾನೆ. ಬಳಿಕ ಹೀನಾಕೌಸರ್ ಕುತ್ತಿಗೆ, ಕೈಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತೀರ್ವ ಗಾಯಗೊಂಡಿದ್ದ ಹೀನಾಕೌಸರ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಯಿಂದ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಸ್ಥಳಕ್ಕೆ ಮಾರ್ಕೇಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.