ಮಹಾರಾಷ್ಟ್ರ: ದನದ ಕೊಟ್ಟಿಗೆಯಲ್ಲಿ ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಾಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ವಾರದಿಂದ ಈ ಪ್ರದೇಶದಲ್ಲಿ ಚಿರತೆಯೊಂದು ಸುತ್ತಾಡಿ ಆರು ಜನರ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಅನೇಕ ಪ್ರಾಣಿಗಳ ಮೇಲೆ ದಾಳಿ ಮಾಡಿ ಕೊಂದು ತಿಂದಿತ್ತು. ಸದ್ಯ ಬಾಳಾಪುರ ಗ್ರಾಮದ ಹೊರವಲಯದಲ್ಲಿ ರೈತ ದಿಮ್ ದೇವ್ ಸಾಲೋಟೆ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಚಿರತೆ ಸೋಮವಾರ ಬೆಳಗ್ಗೆ ಮೂರು ಮರಿಗಳಿಗೆ ಜನ್ಮ ನೀಡಿದೆ.
ಮಾಹಿತಿ ತಿಳಿದು ಗ್ರಾಮಸ್ಥರು ಬಂದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. ದನದ ಕೊಟ್ಟಿಗೆಯಲ್ಲಿ ಕಿರುಚಾಟ ಕೇಳಿದ ಸ್ಥಳೀಯರಿಗೆ ಮೂರು ಚಿರತೆ ಮರಿಗಳು ಕಾಣಿಸಿವೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಮರಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಸದ್ಯ ಮರಿಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.