ಶಿವಮೊಗ್ಗ: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಪ್ರಿಯಕರನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದ ಯುವತಿ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕೊಲೆ ಮಾಡಿದ ಆರೋಪಿ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೀಗಾಗಿ ಯುವತಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಕೋಪಗೊಂಡ ಪ್ರಿಯಕರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ತೀರ್ಥಹಳ್ಳಿಯಲ್ಲಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ಓದುತ್ತಿದ್ದಳು. ಈ ವೇಳೆ ಇಬ್ಬರ ಮಧ್ಯೆ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ನಂಬಿಸಿ ಯುವಕ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದಾಗಿ ಆತನ ಕುಟುಂಬಸ್ಥರು ಮದುವೆಗೆ ವಿರೋಧಿಸಿದ್ದಾರೆ. ಇತ್ತ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಜು.2 ರಂದು ಕೊಪ್ಪದಿಂದ ಯುವತಿ ಬಂದಿದ್ದಳು. ಯುವಕನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು.
ನಮ್ಮ ಮನೆಗೆ ಈಗ ಬರಬೇಡ. ಈಗ ಊರಿಗೆ ಹೋಗು ಎಂದು ಪ್ರಿಯಕರ ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಭಯಭೀತನಾದ ಯುವಕ, ಯುವತಿಯ ಶವವನ್ನು ಮುಂಬಾಳು ಬಳಿ ಹೂತಿಟ್ಟು ತೆರಳಿದ್ದ. ಇತ್ತ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ, ಯುವಕ ರಹಸ್ಯ ಹೇಳಿದ್ದಾನೆ. ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಯುವಕ ಬಿಚ್ಚಿಟ್ಟಿದ್ದಾನೆ.








