ನವದೆಹಲಿ : ಚಂದ್ರಯಾನದ (Chandrayana-3) ನಂತರ ಸೂರ್ಯನ (Sun) ಅಧ್ಯಯನಕ್ಕೆ ಇಸ್ರೋ ಈಗ ಮುಂದಾಗಿದ್ದು, ಸೆಪ್ಟೆಂಬರ್ 2ರಂದು ಬೆಳಗ್ಗೆ11:50 ಕ್ಕೆ ಆದಿತ್ಯ L1 (Aditya L1) ಉಡಾವಣೆ ಮಾಡಲು ನಿರ್ಧಾರ ಕೈಗೊಂಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ಮಾಹಿತಿ ನೀಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗಲಿದೆ ಎಂದು ತಿಳಿಸಿದೆ. ಆದಿತ್ಯ-L1’ ಬಾಹ್ಯಾಕಾಶ ನೌಕೆಯನ್ನು ಎರಡು ವಾರಗಳ ಹಿಂದೆಯೇ ಶ್ರೀಹರಿಕೋಟಾಕ್ಕೆ ಕಳುಹಿಸಲಾಗಿದ್ದು, ಈಗ ಕೊನೆಯ ತಯಾರಿಗಳು ನಡೆಯುತ್ತಿವೆ.
ಆದಿತ್ಯ-L1 ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ಸೂರ್ಯನ ಹೊರಗಿನ ಪದರಗಳು (ಕರೊನಾ) ಮತ್ತು ಬೇರೆ ನಕ್ಷತ್ರಗಳ ಕುರಿತು ಅಧ್ಯಯನ ನಡೆಸಲಿದೆ. ಬಾಹ್ಯಾಕಾಶ ನೌಕೆಯು ದ್ಯುತಿಗೋಳ, ವರ್ಣಗೋಳ (ಸೂರ್ಯನ ಗೋಚರ ಮೇಲ್ಮೈಗಿಂತ ಸ್ವಲ್ಪ ಮೇಲೆ) ಹಾಗೂ ಹೊರಗಿನ ಪದರವನ್ನು (ಕರೋನಾ) ವಿವಿಧ ತರಂಗ ಬ್ಯಾಂಡ್‌ಗಳಲ್ಲಿ ವೀಕ್ಷಿಸಲು ಸಹಾಯ ಮಾಡುವ ಏಳು ಪೇಲೋಡ್‌ಗಳನ್ನು ಒಯ್ಯಲಾಗುತ್ತದೆ.
ಆದಿತ್ಯ L1 ಮಿಷನ್ ಸೂರ್ಯನನ್ನು ಮತ್ತು ನಮ್ಮ ಗ್ರಹದ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ.