ಏಷ್ಯನ್ ಕ್ರೀಡಾಕೂಟದ ಮಹಿಳೆಯರ 100 ಮೀಟರ್ ಹರ್ಡಲ್ಸ್ ಓಟದಲ್ಲಿ ಚೀನಾದ ಕುತಂತ್ರದ ಮಧ್ಯೆಯೂ ಜ್ಯೋತಿ ಯರ್ರಾಜಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಈ ಸ್ಪರ್ಧೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಚೀನಾ ಓಟಗಾರ್ತಿ ಆರಂಭದಲ್ಲಿಯೇ ದೊಡ್ಡ ಪ್ರಮಾದ ಮಾಡಿದ್ದರು. ಗುಂಡು ಹಾರಿಸುವುದಕ್ಕೂ ಮುನ್ನ ಚೀನಾದ ರೇಸರ್ ಯಾನಿ ವು ಓಟ ಆರಂಭಿಸಿದ್ದಳು. ನಂತರ ಜ್ಯೋತಿ ಯರ್ರಾಜಿ ಕೂಡ ಓಡಲು ಮುಂದಾದರು.
ಆದರೆ ಅಥ್ಲೆಟಿಕ್ಸ್ನಲ್ಲಿ ಇದನ್ನು ತಪ್ಪು ಆರಂಭ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಗನ್ ಶಾಟ್ಗೂ ಮುನ್ನ ಓಡಿದ ಕ್ರೀಡಾಪಟುಗಳನ್ನು ರೇಸ್ನಿಂದ ಹೊರಹಾಕಲಾಗುತ್ತದೆ.ಆಗ ಇಬ್ಬರನ್ನೂ ಅನರ್ಹಗೊಳಿಸಿದರು. ಈ ಬಗ್ಗೆ ಮೇಲ್ಮನವಿ ಸಲ್ಲಿಸಿ ಇಬ್ಬರೂ ಕ್ರೀಡಾಪಟುಗಳು ಪ್ರತಿಭಟಿಸಿದರು. ಯಾನಿ ವು ಮೊದಲು ಓಡಲು ಪ್ರಾರಂಭಿಸಿದ್ದರು ಎಂಬುದು ಸ್ಪಷ್ಟವಾಯಿತು. ಅಥ್ಲೆಟಿಕ್ಸ್ ನಿಯಮಗಳ ಪ್ರಕಾರ, ಚೀನಾದ ಓಟಗಾರ್ತಿಯನ್ನು ಹೊರಹಾಕಬೇಕಾಗಿತ್ತು. ಆದರೆ ಅಧಿಕಾರಿಗಳು ಇಬ್ಬರನ್ನೂ ಮತ್ತೆ ರೇಸ್ಗೆ ಸೇರಿಸಿಕೊಂಡರು. ಓಟ ಮುಗಿದ ನಂತರ ಚೀನಾದ ಯುವಿ ಲಿನ್ ಪ್ರಥಮ ಸ್ಥಾನ ಪಡೆದರೆ, ಯಾನಿ ವು ದ್ವಿತೀಯ ಸ್ಥಾನ ಹಾಗೂ ಜ್ಯೋತಿ ತೃತೀಯ ಸ್ಥಾನ ಪಡೆದರು.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಅಥ್ಲೀಟ್ ಆಯೋಗದ ಮುಖ್ಯಸ್ಥೆ ಅಂಜು ಬಾಬಿ ಜಾರ್ಜ್ ಆಗ ಅಲ್ಲಿದ್ದರು. ಅವರ ವಾದಿಸಿದರು. ವಿಡಿಯೋ ಮರು ಪರಿಶೀಲಿಸಿದಾಗ ಯಾನಿ ವು ಮೊದಲೇ ಓಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ದ್ವಿತೀಯ ಸ್ಥಾನ ಪಡೆದಿದ್ದ ಚೀನಾ ಓಟಗಾರ್ತಿ ಅನರ್ಹಗೊಂಡಿದ್ದು, ಮೂರನೇ ಸ್ಥಾನದಲ್ಲಿದ್ದ ಜ್ಯೋತಿ ಬೆಳ್ಳಿ ಗೆದ್ದಿದ್ದಾರೆ.