ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ
ತೆಲಂಗಾಣ: ತಂದಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕಾಮುಕ ತಂದೆ 15 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತ 3 ವರ್ಷ ಅತ್ಯಾಚಾರವೆಸಗಿದ್ದಾನೆ. ಮಾರ್ಪಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ದೂರ್ತನಿಗೆ ಮೂವರು ಪತ್ನಿಯರಿದ್ದು, ಮೊದಲ ಪತ್ನಿಯಿಂದ ಬೇರ್ಪಟ್ಟು, ಎರಡನೇ ಮದುವೆ ಮಾಡಿಕೊಂಡಿದ್ದ, ಆದರೆ ಅವಳು ಮೃತಪಟ್ಟಿದ್ದರು. ಸದ್ಯ ಆರೋಪಿ ಮೂರನೇ ಪತ್ನಿಯೊಂದಿಗೆ ವಾಸವಿದ್ದು, ಪುತ್ರ ಮತ್ತು ಪುತ್ರಿ ಇದ್ದಾರೆ. ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗುತ್ತಿದೆ.
ಸಂತ್ರಸ್ತೆ ತನ್ನ ತಂದೆಯ ಮೊದಲ ಪತ್ನಿಗೆ ತಂದೆಯ ವರ್ತನೆಯ ಬಗ್ಗೆ ಫೋನ್ ಮೂಲಕ ಮಾಹಿತಿ ನೀಡಿದ್ದಳು. ಮಗಳಿಂದ ಮಾಹಿತಿ ಪಡೆದ ತಾಯಿ ಪೊಲೀಸ್ ಸಹಾಯವಾಣಿ 100ಕ್ಕೆ ದೂರವಾಣಿ ಕರೆ ಮಾಡಿ ದೂರು ನೀಡುವಂತೆ ಬಾಲಕಿಗೆ ಸೂಚಿಸಿದ್ದರು.
ತಾಯಿಯ ಸಲಹೆಯಂತೆ ಬಾಲಕಿ ತಂದೆ ವಿರುದ್ಧ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಳು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.