ರಾಮನಗರ: ಕಾಮುಕನೊಬ್ಬ ನನಗೆ ಮುದ್ದೆ (Ragi mudde) ಮಾಡುವುದಕ್ಕೆ ಬರುವುದಿಲ್ಲ. ಮಾಡಿಕೊಡಿ ಎಂದು ಕರೆದು 19 ವರ್ಷದ ಯುವತಿ (Girl)ಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವೊಂದು ಕೇಳಿ ಬಂದಿದೆ.
ಜಿಲ್ಲೆಯ ಬಿಡದಿ ಹೋಬಳಿಯ ಗ್ರಾಮದಲ್ಲಿ 20 ದಿನಗಳ ಹಿಂದೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಚಂದ್ರು ಎನ್ನುವವರ ಮನೆಯಲ್ಲಿ ಘಟನೆ ನಡೆದಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಗೋಪಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುದ್ದೆ ಮಾಡುವ ನೆಪದಲ್ಲಿ ಯುವತಿಯನ್ನು ಮನೆಗೆ ಕರೆದು ಬಾಗಿಲು ಹಾಕಿ ಒತ್ತಾಯ ಪೂರ್ವಕವಾಗಿ ಬಟ್ಟೆ ಕಳಚಿ, ಅತ್ಯಾಚಾರ ನಡೆಸಿದ್ದಾನೆ. ನಂತರ ಅತ್ಯಾಚಾರದ ವಿಡಿಯೋ ಮಾಡಿದ್ದಾನೆ. ಯಾರಿಗಾದರೂ ಹೇಳಿದರೆ ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸದ್ಯ ಬಂಧಿತ ಆರೋಪಿ ಗೋಪಿ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಬಿಡದಿ ಪೊಲೀಸರು ರಿಟ್ರೀವ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.