ರಾಜಧಾನಿಯಲ್ಲಿ ವಿಚಿತ್ರ ಸೈಕೋ ಒಬ್ಬಾತ ಕಂಡು ಬಂದಿದ್ದು, ಇವನ ಟಾರ್ಗೆಟ್ ಮಕ್ಕಳು, ಮಹಿಳೆಯರು ಅಲ್ಲ, ಬದಲಾಗಿ ಈತ ಒಂಟಿ ಸೆಕ್ಯೂರಿಟಿ ಗಾರ್ಡ್ ಗಳನ್ನೇ ಹುಡುಕಿ ಚಾಕುವಿನಿಂದ ಇರಿದು ಹಾಕುತ್ತಿದ್ದಾನೆ.
ಸದ್ಯ ಈ ಕ್ರಿಮಿನಲ್ ನ ಅಟ್ಟಹಾಸಕ್ಕೆ ಸೆಕ್ಯೂರಿಟಿ ಗಾರ್ಡ್ ಗಳು ಭಯದಿಂದ ಕಾಲ ಕಳೆಯುವಂತಾಗುತ್ತಿದೆ. ಈಗಾಗಲೇ ಪೊಲೀಸ್ ಠಾಣೆಗಳಿಗೆ ಈತ ಬೇಕಾಗಿದ್ದು, ಮಧ್ಯರಾತ್ರಿಯೇ ಈತ ತನ್ನ ಕೃತ್ಯಗಳನ್ನು ಎಸಗುತ್ತಿರುತ್ತಾನೆ. ಕಂಠಪೂರ್ತಿ ಕುಡಿದು, ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಬರುವ ಈತ ಮಧ್ಯರಾತ್ರಿ ಎರಡರಿಂದ ಮೂರು ಗಂಟೆಯ ಅವಧಿಯಲ್ಲಿ ಒಂಟಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಹುಡುಕುತ್ತಿರುತ್ತಾನೆ.
ತೌಸೀಫ್ ಎಂಬಾತ ಈ ಸೈಕೋ ಎನ್ನಲಾಗಿದೆ. ಈದ ಈಗಾಗಲೇ ಆರ್.ಟಿ.ನಗರ, ಜೆ.ಸಿ. ನಗರ, ಕೆ.ಜಿ. ಹಳ್ಳಿ, ಸಂಜಯ್ ನಗರ ಸೆಕ್ಯೂರಿಟಿ ಗಾರ್ಡ್ ಗಳಿಗೆ ಇರಿದಿದ್ದಾನೆ. ಈತ ಕಳೆದ ಬಾರಿ ಮಾಜಿ ಸಿಎಂ ಮನೆ ಹತ್ತಿರ ಸೆಕ್ಯೂರಿಟಿಗೆ ಚಾಕುವಿನಿಂದ ಇರಿದಿದ್ದಾನೆ. ಸಾಸಿವು ಉದ್ಧೇಶದಿಂದಲೇ ಇರಿದಿದ್ದಾನೆ ಎನ್ನಲಾಗಿದೆ. ಸದ್ಯ ಈತ 2 ದಿನಗಳ ಹಿಂದೆ ಪೊಲೀಸರ ಬಲೆಗೆ ಬಿದ್ದಿದ್ದು, ಹಲವು ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಸಿಸಿಟಿವಿ ಪರಿಶೀಲನೆ ಮಾಡಿ ಆರ್.ಟಿ ನಗರ 80 ಫೀಟ್ ರೋಡ್ ಬಳಿ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.








