ಬೆಂಗಳೂರು: ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಉತ್ತರಾಖಂಡ ಮೂಲದ ಬಿ.ಟೆಕ್ ಓದುತ್ತಿದ್ದ ವಿದ್ಯಾರ್ಥಿ ಹರ್ಷಿತ್ ಕೊಟ್ನಾಲಾ ಕಾಲೇಜಿಗೆ ಹೋಗುವುದಾಗಿ ಹೇಳಿ ಹಾಸ್ಟೆಲ್ ನಿಂದ ತೆರಳಿದ್ದ. ಆದರೆ, ನಾಲ್ಕೈದು ದಿನ ಕಳೆದರೂ ಮರಳಿ ಬಂದಿರಲಿಲ್ಲ. ಆದರೆ, ಆನೇಕಲ್ ಸಮೀಪದ ತೆಲಗರಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಈ ವಿದ್ಯಾರ್ಥಿ ಗುಮ್ಮಾಳಾಪುರದ ಕಾಲೇಜಿನ ಹಾಸ್ಟೆಲ್ನಲ್ಲಿಯೇ ವಾಸವಿದ್ದ. ಪ್ರತಿ ದಿನ ಸ್ನೇಹಿತರೊಂದಿಗೆ ಕಾಲೇಜಿಗೆ ತೆರಳುತ್ತಿದ್ದ. ಆದರೆ, ಫೆ. 21ರಂದು ಕಾಲೇಜಿನ ಬಸ್ನಲ್ಲಿ ತೆರಳದೆ, ಹಾಸ್ಟೆಲ್ನಿಂದ ತಡವಾಗಿ ಹೊರಗೆ ಬಂದಿದ್ದ ಎನ್ನಲಾಗಿದೆ. ಆದರೆ, ಕಾಲೇಜಿಗೆ ಹೋಗದೆ ಕಾಣೆಯಾಗಿದ್ದಾನೆ.
ಇತ್ತ ವಿದ್ಯಾರ್ಥಿ ನಾಪತ್ತೆಯಾಗುತ್ತಿದ್ದಂತೆ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಸದ್ಯ ಶವವಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾಲೇಜಿಗೆ ಹೋಗದೆ ಸ್ನೇಹಿತರ ಜತೆ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ನಿರ್ಜನ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮದ್ಯದ ಬಾಟೆಲ್, ತಿಂಡಿ-ತಿನಿಸು ಬಿದ್ದಿದ್ದು, ಈ ನಡುವೆ ಹರ್ಷಿತ್ ಹಾಗೂ ಜೊತೆಯಲ್ಲಿದ್ದವರ ನಡುವೆ ನಡೆದಿರುವ ಕುರಿತು ತಿಳಿದಿಲ್ಲ. ಈ ವೇಳೆ ಹರ್ಷಿತ್ನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.