ಇತ್ತೀಚೆಗೆ ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದಿರುವ ಪ್ರಕರಣ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 12 ವರ್ಷದ ಬಾಲಕರು ಕಲ್ಲು ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಶನಿವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಯಾರೋ ಕಲ್ಲು ಹೊಡೆದಿದ್ದು, ಗಾಜು ಪುಡಿಪುಡಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ರೈಲ್ವೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರು. ಆಜಾದ್ ನಗರ ಹಾಗೂ ಬಾಷಾ ನಗರದ 12 ವರ್ಷದ ಬಾಲಕರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ಹೊಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಬಾಲಕರನ್ನು ಚಿತ್ರದುರ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಕರ್ನಾಟಕದ ಮೊದಲ ರೈಲು ಎಂಬ ಕೀರ್ತಿಗೆ ಪಾತ್ರವಾಗಿದ್ದ ವಂದೇ ಭಾರತ್ ರೈಲು ಬೆಂಗಳೂರು – ಮೈಸೂರು- ಚೆನ್ನೈ ನಡುವೆ ಸಂಚರಿಸುವ ರೈಲಿನ ಮೇಲೆ ಕೂಡ ಕಲ್ಲು ತೂರಾಟ ನಡೆದಿತ್ತು. ಇತ್ತೀಚಿಗೆ ಆರಂಭವಾಗಿದ್ದ ಧಾರವಾಡ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ದಾವಣಗೆರೆ ನಗರದ ಜಿಎಂಐಟಿ ಬಳಿ ಕಲ್ಲು ತೂರಾಟ ನಡೆದಿತ್ತು. ರೈಲಿನ ಬೋಗಿಯ ಗ್ಲಾಸ್‌ಗೆ ಕಲ್ಲು ತಗುಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು.








