ಮುಂಬೈ: ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದೆ ಎಂದು ಆರೋಪಿಸಿ ಮತದಾರನೊಬ್ ಇವಿಎಂಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ (Maharashtra) ಸೊಲ್ಲಾಪುರ (Solapur) ಜಿಲ್ಲೆಯ ಸಂಗೋಳ ತಾಲೂಕಿನ ಬಾದಲವಾಡಿಯಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹಚ್ಚಿರುವ ಯುವಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ಶಿರೀಶ ದೇಶಪಾಂಡೆ ಮತಗಟ್ಟೆಗೆ ಭೇಟಿ ನೀಡಿದರು. ಸಂಗೋಳ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದೆ.
ಬೆಂಕಿ ಹಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಹೊಸ ಇವಿಎಂ ತರುವವರೆಗೂ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಮತಗಟ್ಟೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.