ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಹತ್ತಿರ ಮೈಸೂರು ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ಹಸಿವಿನಿಂದ ಕುಳಿದುಕೊಂಡಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ.
ಅದು ಕುಳಿತಲ್ಲಿಯೇ ಕುಳಿತಂತೆ ಕಂಡಿದೆ. ಹೀಗಾಗಿ ಕೆಲವರು ಭಯದಿಂದ ದಿಕ್ಕು ತಪ್ಪಿಸಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಆನೆ ಏಳುವ ಸೂಚನೆ ಬಾರದಿದ್ದಾಗ ಹತ್ತಿರ ಹೋಗಿ ಹಲವರು ಗಮನಿಸಿದ್ದಾರೆ. ಆನಂತರ ಅರಣ್ಯ ಇಲಾಖೆಗೂ ತಿಳಿಸಿದ್ದಾರೆ. ಇಲಾಖೆ ಸಿಬ್ಬಂದಿ ಬಂದು ನೋಡಿದಾಗ ಆನೆ ಸತ್ತಿರುವುದು ತಿಳಿದು ಬಂದಿದೆ.
ದೈತ್ಯ ಆನೆ ಅತ್ಯಂತ ಅಸಹಾಯಕವಾಗಿ ಬಿದ್ದು ಪ್ರಾಣ ಕಳೆದುಕೊಂಡಿದ್ದಕ್ಕೆ ವಿದ್ಯುತ್ ಶಾಕ್ ಎನ್ನಲಾಗುತ್ತಿದೆ. ಆದರೆ, ಸಾಮಾನ್ಯವಾಗಿ ರೈತರು ಪ್ರಾಣಿಗಳನ್ನು ಹೆದರಿಸುವುದಕ್ಕಾಗಿ ಸೋಲಾರ್ ಪವರ್ ಕನೆಕ್ಟ್ ಮಾಡಿರುತ್ತಾರೆ. ಹೀಗೆ ಮಾಡಿದರೆ ಅದನ್ನು ಸ್ಪರ್ಶಿಸುವ ಪ್ರಾಣಿಗಳಿಗೆ ಸಣ್ಣ ಶಾಕ್ ಆಗಿ ಅವರು ಅಲ್ಲಿಂದ ಹೋಗುತ್ತಾರೆ. ಆದರೆ, ಇಲ್ಲಿ ಜಮನಿನ ಮಾಲೀಕ ಮಾತ್ರ ವಿದ್ಯುತ್ ಸಂಪರ್ಕವನ್ನೇ ಕೊಟ್ಟಿದ್ದಾನೆ. ಇದರಿಂದಾಗಿ ಆನೆ ಸ್ಪರ್ಶಿಸಿ ಸಾವನ್ನಪ್ಪಿದೆ ಎನ್ನಲಾಗುತ್ತಿದೆ.
ಎಚ್ ಡಿ ಕೋಟೆ ತಾಲ್ಲೂಕಿನ ಡಿ.ಬಿ. ಕುಪ್ಪೆ ವಿಭಾಗದಲ್ಲಿ ಈ ಆನೆ ಹಲವು ದಿನಗಳಿಂದ ಆಹಾರ ಅರಸಿ ಓಡಾಡುತ್ತಿತ್ತು. ಮಚ್ಚೂರು ಹಾಗೂ ಆನೆಮಾಳ ಗ್ರಾಮದಲ್ಲಿನ ತೋಟವೊಂದರ ಬಳಿ ಅದು ಆಗಾಗ ಕಾಣುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆಹಾರಕ್ಕಾಗಿ ಬಂದು ಬೇಲೆ ದಾಟುತ್ತಿದ್ದ ಸಂದರ್ಭದಲ್ಲಿ ಶಾಕ್ ಹೊಡೆದಿದೆ. ಅಲ್ಲೇ ಕುಕ್ಕರುಗಾಲಿನಲ್ಲಿ ಬಿದ್ದಿದೆ. ಅಲ್ಲದೇ, ಕುಳಿತ ಸ್ಥಿತಿಯಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ. ಉದಯ್ ಬಿನ್ ಥಾಮಸ್ ಎಂಬ ವ್ಯಕ್ತಿ ತನ್ನ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ವಿದ್ಯುತ್ ಶಾಕ್ ನಿಂದಾಗಿ ಕಾಡಾನೆ ಸತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ವೀಕ್ಷಿಸಿದ್ದಾರೆ. ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ .








