ಯುವ ಕ್ರಿಕೆಟ್ ಆಟಗಾರ ವಂಶಿಕೃಷ್ಣ ಕರ್ನಲ್ ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದ್ದಾರೆ.
ಅಂಡರ್-23 ಟೂರ್ನಿಯ ಈ ಪಂದ್ಯದಲ್ಲಿ ಆಂಧ್ರ ಪ್ರದೇಶ ಮತ್ತು ರೈಲ್ವೇಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ಪರ ಆರಂಭಿಕ ಆಟಗಾರ ಅನ್ಶ್ ಯಾದವ್ (268) ಹಾಗೂ ರವಿ ಸಿಂಗ್ (258) ದ್ವಿಶತಕ ಸಿಡಿಸಿದ್ದರು.
ಅಂಚಿತ್ ಯಾದವ್ (133) ರನ್ಗಳ ಕೊಡುಗೆ ನೀಡಿದರೆ, ತೌಫಿಕ್ ಉದ್ದೀನ್ (87) ಅರ್ಧಶತಕ ಸಿಡಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರೈಲ್ವೇಸ್ ತಂಡವು 9 ವಿಕೆಟ್ ನಷ್ಟಕ್ಕೆ 865 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಆಂಧ್ರ ಪ್ರದೇಶ, ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ವಂಶಿ ಕೃಷ್ಣ ಸ್ಪೋಟಕ ಇನಿಂಗ್ಸ್ ಕಟ್ಟಿದ್ದರು. ಒಂದೇ ಓವರ್ ನಲ್ಲಿ 6 ಸಿಕ್ಸ್ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು.
ಪಂದ್ಯದ 10ನೇ ಓವರ್ನಲ್ಲಿ ಲೆಗ್ ಸ್ಪಿನ್ನರ್ ದಮನ್ದೀಪ್ ಸಿಂಗ್ ಬೌಲಿಂಗ್ ನಲ್ಲಿ ಈ ಸಾಧನೆ ಮಾಡಿದರು. ಈ ವೇಳೆ ವಂಶಿ ಕೃಷ್ಣ ಕೇವಲ 48 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದರು. ಒಟ್ಟು 64 ಎಸೆತಗಳನ್ನು ಎದುರಿಸಿದ ವಂಶಿ 10 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 110 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಂಶಿ ಕೃಷ್ಣ ಅವರ ಈ ಶತಕದ ನೆರವಿನಿಂದ ಆಂಧ್ರ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 378 ರನ್ ಕಲೆಹಾಕಿತು. ಪಂದ್ಯ ಡ್ರಾ ಆಗಿದೆ.
ಒಂದೇ ಓವರ್ನಲ್ಲಿ 6 ಸಿಕ್ಸ್ ಬಾರಿಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಂಶಿ ಕೃಷ್ಣ ಪಾತ್ರರಾಗಿದ್ದಾರೆ. ರವಿ ಶಾಸ್ತ್ರಿ 1986 ರಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ 6 ಸಿಕ್ಸ್ ಬಾರಿಸಿದ್ದರು. 2007 ರ ಟಿ20 ವಿಶ್ವಕಪ್ನಲ್ಲಿ ಸ್ಟುವರ್ಟ್ ಬಾಡ್ ಓವರ್ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು. 2022 ರ ವಿಜಯ್ ಹಜಾರೆ ಟೂರ್ನಿಯಲ್ಲಿ ರುತಾಜ್ ಗಾಯಕ್ವಾಡ್ ಈ ಸಾಧನೆ ಮಾಡಿದ್ದರು. ಸದ್ಯ ವಂಶಿ ಕೃಷ್ಣ ಈ ಸಾಧನೆ ಮಾಡಿದ್ದಾರೆ.