ಬಾವಿಗೆ ಬಿದ್ದ ಮೊಬೈಲ್ ತೆಗೆದಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ Saaksha Tv
ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದ ಮೊಬೈಲ್ ನ್ನು ತೆಗೆದುಕೊಳ್ಳಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಅನಿಲ್ ಕುಮಾರ್ ಮೃತ ಯುವಕ. 3 ಅಡಿ 60 ಅಡಿ ಆಳ ಇರುವ ಕಿರು ಬಾವಿಯೊಳಗೆ ಆಕಸ್ಮಿಕ ಮೊಬೈಲ್ ಫೋನ್ ಜಾರಿಬಿದ್ದಿದೆ. ಮೊಬೈಲ್ ಫೋನ್ಗಾಗಿ ಅನಿಲ್ ಕುಮಾರ್ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾನೆ. ಆದರೆ ಬಾವಿಯೊಳಗೆ ಇಳಿದ ಅನಿಲ್ ಉಸಿರು ಗಟ್ಟಿ ಮೇಲೆ ಬರಲಾಗದೇ ನಿತ್ರಾಣಗೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕೂಡಲೇ ಆಕ್ಸಿಜನ್ ಬಿಟ್ಟು ಬದುಕಿಸುವ ಪ್ರಯತ್ನಗಳನ್ನು ಮಾಡಿದರೂ ಫಲಪ್ರದವಾಗಿಲ್ಲ. ಸಾಕಷ್ಟು ಹರಸಾಹಸ ಪಟ್ಟು ಅನಿಲ್ ನನ್ನು ಮೇಲೆಕ್ಕೆ ಎತ್ತಿದಾಗ ಮೃತಪಟ್ಟಿದ್ದಾನೆ. ಇದೀಗ ಅನಿಲ್ ಮೃತ ದೇಹವನ್ನು ಶಿಡ್ಲಘಟ್ಟ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.