ಹೈದರಾಬಾದ್: ತೆಲಂಗಾಣದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 100 ರೂ. ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆ ಮಾಡಿದೆ.
ತೆಲಂಗಾಣ (Telangana) ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಹಾಗೂ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಮನೆ ಮೇಲೆಯೇ ದಾಳಿ ನಡೆಸಲಾಗಿದೆ. ಬಾಲಕೃಷ್ಣ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಕೋಟಿಗಳನ್ನು ಗಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಮ್ಮ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ಬಾಲಕೃಷ್ಣ ಅವರಿಗೆ ಸೇರಿದ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಚಿನ್ನ, ಫ್ಲಾಟ್, ಬ್ಯಾಂಕ್ ಠೇವಣಿ, ಬೇನಾಮಿ ಆಸ್ತಿ ಸೇರಿದಂತೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 40 ಲಕ್ಷ ನಗದು, 2 ಕಿ. ಗ್ರಾಂಗಳಷ್ಟು ಚಿನ್ನಾಭರಣ, 60 ಅತ್ಯಾಧುನಿಕ ಕೈಗಡಿಯಾರಗಳು, ಆಸ್ತಿ ದಾಖಲೆಗಳು ಮತ್ತು ಗಣನೀಯ ಬ್ಯಾಂಕ್ ಠೇವಣಿ ಸೇರಿದಂತೆ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.