ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್ ಝಜ್ಜರ್ ಕೋಟ್ಲಿಯಲ್ಲಿ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 10 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನೂ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಡಿಆರ್‌ಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಮೃತರನ್ನು ಬಿಹಾರದ ಲಖಿ ಸರಾಯ್ ಮತ್ತು ಬೇಗುಸರಾಯ್ ಜಿಲ್ಲೆಯ ನಿವಾಸಿಗಳು ಎನ್ನಲಾಗಿದೆ.
ಸಿಆರ್‌ಪಿಎಫ್ ಅಧಿಕಾರಿ ಅಶೋಕ್ ಚೌಧರಿ ಈ ವಿಷಯವಾಗಿ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಹೊರ ತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಯಾತ್ರಾರ್ಥಿಗಳು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಹೇಲಿದ್ದಾರೆ.
ಕತ್ರಾವು ತ್ರಿಕೂಟ ಬೆಟ್ಟಗಳ ಮೇಲಿರುವ ಪ್ರಸಿದ್ಧ ತೀರ್ಥಯಾತ್ರೆಯ ಮೂಲ ಶಿಬಿರವಾಗಿದೆ. ಸದ್ಯದ ಮಾಹಿತಿಯಂತೆ 20 ಜನ ಗಾಯಗೊಂಡಿದ್ದಾರೆ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.