ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ | 7 ಮಂದಿ ಭಕ್ತರ ಸಾವು – Saaksha Tv
ಸೊಲ್ಲಾಪುರ: ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೊಲ್ಲಾಪುರದ ಕೊಂಡಿ – ಕೇಗಾಂವ್ ದಲ್ಲಿ ನಡೆದಿದೆ.
ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 35ರಿಂದ 40 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರು ಪಂಡರಾಪುರಕ್ಕೆ ತೆರಳುತ್ತಿದ್ದ ಭಕ್ತರ ಎಂದು ತಿಳಿದು ಬಂದಿದೆ. ಮೃತರು ಹಾಗೂ ಗಾಯಗೊಂಡವರೆಲ್ಲರೂ ತುಳಜಾಪುರ ತಾಲೂಕಿನ ಕಡಮವಾಡಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಈ ಎಲ್ಲ ಭಕ್ತರು ಏಕಾದಶಿ ನಿಮಿತ್ತ ಟ್ರ್ಯಾಕ್ಟರ್‌ನಲ್ಲಿ ಪಂಡರಾಪುರಕ್ಕೆ ಸೊಲ್ಲಾಪುರದಿಂದ ಮೊಹೋಲ್ ಮಾರ್ಗವಾಗಿ ತೆರಳುತ್ತಿದ್ದರು. ಆಗ ಕೊಂಡಿ – ಕೇಗಾಂವ್ ಬಳಿ ಹಿಂಬದಿಯಿಂದ ಬಂದ ಟ್ರಕ್ (ಎಂಎಚ್ 12 ಟಿವಿ 7348) ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ನಲ್ಲಿದ್ದ ಭಕ್ತರು ಮೇಲಕ್ಕೆ ಹಾರಿ ರಸ್ತೆಯಲ್ಲಿ ಚೆಲ್ಲಾ – ಪಿಲ್ಲಿಯಾಗಿ ಬಿದ್ದಿದ್ದಾರೆ. ಈ ವೇಳೆ ಏಳು ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳೀಯರೊಂದಿಗೆ ಜೊತೆಗೂಡಿದ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಪರಿಹಾರ ಕಾರ್ಯ ಕೈಗೊಂಡು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.