ನವದೆಹಲಿ : ಚಿಕ್ಕ ಮಕ್ಕಳನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದ ಆರೋಪಿಗೆ ದೆಹಲಿ ನ್ಯಾಯಾಲಯ ಜೀವವಾಧಿ ಶಿಕ್ಷೆ ವಿಧಿಸಿದೆ.
ಈ ಆರೋಪಿಯು 30 ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದಿ (Rape)ದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ (Delhi) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಆರೋಪಿಯ ಹೆಸರು ರವೀಂದರ್ ಕುಮಾರ್. ಈತ ಆರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದಿದ್ದು ಸಾಬೀತಾದ ಹಿನ್ನೆಲೆಯಲ್ಲಿ ರೋಹಿಣಿ ನ್ಯಾಯಾಲಯವು ಆತ ಅಪರಾಧಿ ಎಂಬ ತೀರ್ಪು ನೀಡಿತ್ತು. ಮೂಲತಃ ಉತ್ತರಪ್ರದೇಶದ ಕಾಸ್ ಗಂಜ್ ನ ನಿವಾಸಿ ರವೀಂದರ್ ಕುಮಾರ್ 2008ರಲ್ಲಿ ದೆಹಲಿಗೆ ಆಗಮಿಸಿದ್ದ. ಆ ಸಂದರ್ಭದಲ್ಲಿ ಅವನ ವಯಸ್ಸು 18. ತೀವ್ರ ಮದ್ಯವ್ಯಸನಿ ಮತ್ತು ಡ್ರಗ್ಸ್ (Drugs) ಚಟವನ್ನು ಈತ ಅಂಟಿಸಿಕೊಂಡಿದ್ದ. ಈತ ದೆಹಲಿಯಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದ. ದಿನ ಕೆಲಸಕ್ಕೆ ಹೋಗಿ, ಚಟಕ್ಕೆ ಎಲ್ಲವನ್ನೂ ಖರ್ಚು ಮಾಡುತ್ತಿದ್ದ. ಡ್ರಗ್ಸ್ ಸೇವಿಸಿದ ಬಳಿಕ ಮಕ್ಕಳನ್ನು ಹುಡುಕಿಕೊಂಡು ಸುಮಾರು 40 ಕಿಲೋ ಮೀಟರ್‌ವರೆಗೂ ನಡೆದುಕೊಂಡೇ ಹೋಗುತ್ತಿದ್ದ.
ಕಟ್ಟಡ ನಿರ್ಮಾಣ ಸ್ಥಳ ಹಾಗೂ ಕೊಳಗೇರಿ ಈತನ ಟಾರ್ಗೆಟ್. ಅಲ್ಲಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು, ಮಕ್ಕಳಿಗೆ 10 ರೂ. ಅಥವಾ ಸಿಹಿ ತಿನಿಸುಗಳ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ನಂತರ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ.
2008ರಿಂದ 2015ರ ಒಳಗಾಗಿ ಒಟ್ಟು 30 ಮಕ್ಕಳ ಮೇಲೆ ಈ ಪಾಪಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 2015ರಲ್ಲಿ ಈತನನ್ನು ದೆಹಲಿಯಲ್ಲಿ ಬಂಧಿಸಿದ್ದರು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಈತನಿಗೆ ಗರಿಷ್ಠ ಶಿಕ್ಷೆ ನೀಡಬೇಕು ಎಂದು ಕೋರಿದ್ದರು. ಈ ನಿಟ್ಟಿನಲ್ಲಿ ದೆಹಲಿ ಕೋರ್ಟ್ ಈತನಿಗೆ ಜೀವವಾಧಿ ಶಿಕ್ಷೆ ಪ್ರಕಟಿಸಿದೆ.