ನೆಲಮಂಗಲ: ಪಿಎಸ್ಐ ಕೊಲೆ ಮಾಡಿದ ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಜಗದೀಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮಧು, ಹರೀಶ್ ಬಾಬುಗೆ ಬೆಂಗಳೂರು ಗ್ರಾಮಾಂತರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಅಲ್ಲದೇ, 3 ಲಕ್ಷ ರೂ. ದಂಡ ಕೂಡ ವಿಧಿಸಿದೆ. ನ್ಯಾಯಾಧೀಶರಾದ ರಘುನಾಥ್ ತೀರ್ಪು ಪ್ರಕಟಿಸಿದ್ದಾರೆ. 2015ರ ಅಕ್ಟೋಬರ್ 16ರಂದು ಜಗದೀಶ್ ಹತ್ಯೆ ನಡೆದಿತ್ತು. ಆ ಸಂದರ್ಭದಲ್ಲಿ ಅವರು ದೊಡ್ಡಬಳ್ಳಾಪುರ ಠಾಣೆಯ ಪಿಎಸ್ ಐ ಆಗಿದ್ದರು. ಬೈಕ್ ಕಳ್ಳರನ್ನು ಹಿಡಿಯಲು ಬಂದಾಗ ನೆಲಮಂಗಲದಲ್ಲಿ ಚೂರಿಯಿಂದ ಇರಿದು ಕೊಲೆಗೈಯಲಾಗಿತ್ತು.
ಅಲ್ಲದೇ, ಇದೇ ಪ್ರಕರಣದ ಮೂರನೇ ಆರೋಪಿ ಕೃಷ್ಣಪ್ಪ, ಎ4 ತಿಮ್ಮಕ್ಕ, ಎ5 ಹನುಮಂತ ರಾವ್ ಖುಲಾಸೆಯಾಗಿದ್ದಾರೆ. ಡಾನ್ ಆಗುವ ಆಸೆಯಿಂದ ಪಿಎಸ್ ಐ ಹತ್ಯೆ ಮಾಡಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿತ್ತು. ಪ್ರಕರಣವು ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿತ್ತು.