ಮೈಸೂರು: ನಂಜುಂಡೇಶ್ವರ (Nanjundeshwara) ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ನೀಡಲಾಗಿದೆ.
ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ಮಾಡಿದ್ದು, ರಾಜನೆಂದು ಪೂಜಿಸುತ್ತೇವೆ ಎಂದು ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದದ್ದರು. ಈ ಸಂದರ್ಭದಲ್ಲಿ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ಅವರ ವಿರುದ್ಧ ಗುಡುಗಿದ್ದರು.
ಈ ವೇಳೆ ಮೆರವಣಿಗೆ ಮಾಡುತ್ತಿದ್ದಾಗ ಕೆಲ ಕಿಡಿಗೇಡಿಗಳು ಉತ್ಸವ ಮೂರ್ತಿ ಮೇಲೆ ನೀರು ಎರಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗ ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿ ಪಡಿಸಿದ ವಿಚಾರದ ಹಿನ್ನೆಲೆಯಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ದೂರು ನೀಡಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ಇಓ ದೂರು ಸಲ್ಲಿಸಿದ್ದರು.
ಅಲ್ಲದೇ, ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನು ಎರಚುವ ಮೂಲಕ ಅಪಮಾನ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.